ಫೋಟೋಗಾಗಿ ಯೊಸೆಮೈಟ್ ನ್ಯಾಷನಲ್​ ಪಾರ್ಕ್ ತುತ್ತತುದಿ ಏರಿದ್ದ ಭಾರತೀಯ ದಂಪತಿ ಪ್ರಪಾತಕ್ಕೆ ಬಿದ್ದು ಸಾವು

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾ ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳಿದ್ದ ಭಾರತದ ದಂಪತಿಗಳು 800 ಅಡಿ ಪ್ರಪಾತಕ್ಕೆ ಬಿದ್ದು ದುರಂತವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಕ್ಯಾಲಿಫೋರ್ನಿಯಾದ ಖ್ಯಾತ ರಾಷ್ಟ್ರೀಯ ಉದ್ಯಾನದಲ್ಲಿ ದಂಪತಿಗಳಾದ ವಿಷ್ಣು ವಿಶ್ವನಾಥ್​ (29 ವರ್ಷ) ಮತ್ತು ಮೀನಾಕ್ಷಿ ಮೂರ್ತಿ (30 ವರ್ಷ) ಎಂಬುವವರು ಫೋಟೋಗಾಗಿ ಪಾರ್ಕ್ ನ ತುತ್ತತುದಿ ಏರಿದ್ದಾರೆ. ಅಲ್ಲಿಂದ ಸುಮಾರು 800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ. ಈ ಜೋಡಿ ಇಲ್ಲಿನ ಯೊಸೆಮೈಟ್ ನ್ಯಾಷನಲ್​ ಪಾರ್ಕ್​ ನ ಬೆಟ್ಟದ ತುತ್ತತುದಿಯಿಂದ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಯೊಸೆಮೈಟ್ ನ್ಯಾಷನಲ್​ ಪಾರ್ಕ್ ಯೊಸೆಮೈಟ್ ವ್ಯಾಲಿ, ಯೊಸೆಮೈಟ್ ಫಾಲ್ಸ್ ಮತ್ತು ಎಲ್ ಕ್ಯಾಪಿಟನ್ ವೀಕ್ಷಣೆಗೆ ಈ ಜೋಡಿ ತೆರಳಿದ್ದು ಈ ವೇಳೆ ಪಾರ್ಕ್ ನ ತುತ್ತತುದಿಯಲ್ಲಿ ನಿಂತು ಪೋಟೋ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ.

ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಕ್ಟೋಬರ್ 25ರಂದೇ ನ್ಯಾಷನಲ್​ ಪಾರ್ಕ್​ ಅಧಿಕೃತ ಹೇಳಿಕೆ ನೀಡಿತ್ತು. ಆದರೆ ಸೋಮವಾರ ಈ ಮೃತ ದಂಪತಿ ಭಾರತದ ಮೂಲದವರು ಎಂದು ತಿಳಿದು ಬಂದಿದೆ.

ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದು, ಹಲವು ವರ್ಷಗಳಿಂದ ಈ ಜೋಡಿ ಅಮೆರಿಕದಲ್ಲಿ ನೆಲೆಸಿತ್ತು. ಅಮೆರಿಕದ ಸಿಸ್ಕೊ ಸಂಸ್ಥೆಯಲ್ಲಿ ಸಿಸ್ಟಮ್​ ಇಂಜಿನಿಯರ್​ ಆಗಿ ಕೆಲಸ ಸಿಕ್ಕಮೇಲೆ ಈ ದಂಪತಿ ನ್ಯೂಯಾರ್ಕ್​ನಿಂದ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ದಂಪತಿಗೆ ವಿಶ್ವ ಸುತ್ತುವ ಕನಸಿತ್ತು ಎಂಬುದನ್ನು ಅವರೇ ತಮ್ಮ ‘Holidays and HappilyEverAfters’ ಎಂಬ ಬ್ಲಾಗ್​ನಲ್ಲಿ ಬರೆದಿಕೊಂಡಿದ್ದಾರೆ. ಅಲ್ಲದೆ ತಮ್ಮ ಪ್ರವಾಸದ ಫೋಟೋಗಳನ್ನು ಮತ್ತು ಅನುಭವವನ್ನು ನಿಯಮಿತವಾಗಿ ಬ್ಲಾಗ್ ನಲ್ಲಿ ಬರೆಯುತ್ತಿದ್ದರು ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ