ಬೆಂಗಳೂರು,ಅ.30-ಎಸ್ಸೆಸ್ಸೆಲ್ಸಿ, ಪಿಯುಸಿ ದಾಖಲಾತಿ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಬೌದ್ಧ ಧರ್ಮವೆಂದು ಬರೆಸುವ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವ ಬಗ್ಗೆ ತಮಗೆ ತಿಳಿದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ದಾಖಲಾತಿ ವೇಳೆ ಜಾತಿ ಕಾಲಂನಲ್ಲಿ ಬೌದ್ಧ ಧರ್ಮ ಬರೆಸಲು ಅವಕಾಶ ನೀಡಲಾಗಿತ್ತು ಎಂಬ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ. ಈ ಕುರಿತಂತೆ ಪರಿಶೀಲನೆ ನಡೆಸುತ್ತೇವೆ ಎಂದರು.
ವಿದ್ಯಾರ್ಥಿಗಳ ಸಾಲಮನ್ನಾ ಯೋಜನೆ ಕುರಿತಂತೆ ಮುಖ್ಯಮಂತ್ರಿಗಳು ಯಾವುದೇ ಸೂಚನೆ ಕೊಟ್ಟಿಲ್ಲ. ಆರ್ಟಿಐ ಮೂಲಕ ಸಲ್ಲಿಕೆಯಾದ ಅರ್ಜಿ ಆಧರಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಒಂದು ವೇಳೆ ಸರ್ಕಾರ ಸಾಲಮನ್ನಾಕ್ಕೆ ನಿರ್ಧಾರ ಕೈಗೊಂಡರೆ ಮಾಹಿತಿ ನೀಡಲು ತಿಳಿಸಿದರೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಮಮಂದಿರ ನಿರ್ಮಾಣ ಸಂಬಂಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿರುವುದು ಅನಗತ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಜಿಎಸ್ಟಿ ದರ ಕಡಿಮೆ ಮಾಡಿರುವುದು ಚುನಾವಣೆ ಗಿಮಿಕ್ ಅಷ್ಟೇ ಎಂದು ಲೇವಡಿ ಮಾಡಿದರು.