ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಸುವ ಸಮೃದ್ದಿ ಯೋಜನೆ:

ಬೆಂಗಳೂರು,ಅ.30-ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಮಹತ್ವಾಕಾಂಕ್ಷಿ ಸಮೃದ್ದಿ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆ ಘೋಷಿಸಿದೆ.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

800 ಕೋಟಿ ರೂ.ವೆಚ್ಚದಲ್ಲಿ ರಾಜ್ಯಾದ್ಯಂತ 10,600 ಫಲಾನುಭವಿಗಳಿಗೆ ಉದ್ಯೋಗ ಕಲ್ಪಿಸುವ ಈ ಬೃಹತ್ ಯೋಜನೆ ದೇಶದಲ್ಲೇ ಪ್ರಥಮ ಬಾರಿಗೆ ಆರಂಭಿಸಲಾಗುತ್ತಿದೆ.ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
ಹತ್ತು ವರ್ಷಕ್ಕೂ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಮಾಡಿರುವ ಪ್ರತಿಷ್ಠಿತ ಕಂಪನಿಗಳಾದ ಬಾಟಾ, ನೀಲಗಿರಿಸ್, ಹಟ್ಟಿ ಕಾಫಿ, ಪ್ಯಾರಾಗಾನ್, ಮೇರು, ವೋಲ ಸೇರಿದಂತೆ 60ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲವೂ ಒಪ್ಪಿಗೆ ಸೂಚಿಸಿವೆ. ಪ್ರಸ್ತುತ 30 ಕಂಪನಿಗಳು ಈ ಒಪ್ಪಂದಕ್ಕೆ ಸಹಿ ಮಾಡಿವೆ ಎಂದು ವಿವರಿಸಿದರು.

ಇಂತಹ ಪ್ರತಿಷ್ಠಿತ ಕಂಪನಿಗಳ ಶಾಖೆ ತೆರೆಯಲು, ನಿರ್ವಹಣೆ ಮಾಡಲು ಎಸ್ಸಿ-ಎಸ್ಟಿ ಉದ್ಯೋಗಾಂಕಾಕ್ಷಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಯಾವ ಕಂಪನಿಯಿಂದ ಅಭ್ಯರ್ಥಿಗಳು ತರಬೇತಿ ಪಡೆದು, ದೃಢೀಕರಣ ಪಡೆಯುತ್ತಾರೋ ಅಂತಹ ಅಭ್ಯರ್ಥಿಗೆ 10 ಲಕ್ಷದವರೆಗೂ ಅನುದಾನ ನೀಡಲಾಗುತ್ತದೆ.ಅದರಿಂದ ವ್ಯವಹಾರ ಆರಂಭಿಸಬಹುದಾಗಿದೆ.

ಖಾಸಗಿ ಕಂಪನಿಗಳ ವಹಿವಾಟನ್ನು ವಿಸ್ತರಿಸಲು ಹಾಗೂ ಎಸ್ಸಿ-ಎಸ್ಟಿ ನಿರುದ್ಯೋಗಿಗಳು ಉದ್ಯೋಗಸ್ಥರಾಗಲು ಇದೊಂದು ಉತ್ತಮ ಯೋಜನೆಯಾಗಿದ್ದು, ಖಾಸಗಿ ಕಂಪನಿಗಳೇ ತರಬೇತಿ ವೆಚ್ಚ ಭರಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.ಅಲ್ಲದೆ ಸರ್ಕಾರದಿಂದ ನೀಡುವ ಅನುದಾನ ದುರ್ಬಳಕೆಯಾಗದಂತೆ ಪರಿಶೀಲನೆ ನಡೆಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂದೆಲ್ಲ ಸಬ್ಸಿಡಿ ಯೋಜನೆ ಜಾರಿಯಲ್ಲಿದ್ದು ಅದು ಎಷ್ಟರ ಮಟ್ಟಿಗೆ ಬಳಕೆಯಾಗುತ್ತಿತ್ತು ಎಂಬ ಬಗ್ಗೆ ಖಚಿತ ಮಾಹಿತಿ ಸಿಗುತ್ತಿರಲಿಲ್ಲ. ಆದರೆ ಅಂತಹ ಯಾವುದೇ ನ್ಯೂನ್ಯತೆ ಇಲ್ಲದಂತೆ ಸಮೃದ್ದಿ ಯೋಜನೆಯನ್ನು ಕರಾರುವಕ್ಕಾಗಿ ರೂಪಿಸಲಾಗಿದ್ದು, ಇದರಿಂದ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಖಾಸಗಿ ಕಂಪನಿಗಳು ಸಮೃದ್ಧಿ ಯೋಜನೆಯನ್ನು ಗ್ರಾಮೀಣ ಮಾರುಕಟ್ಟೆಯಲ್ಲಿ ಅಭಿವೃದ್ದಿಪಡಿಸಲು ಹೆಚ್ಚು ಒತ್ತು ನೀಡುತ್ತಿದ್ದು, ಗ್ರಾಮೀಣರ ಆಯ್ಕೆಗೆ ಆದ್ಯತೆ ನೀಡಲಾಗುತ್ತಿದೆ. ನ.7ರಿಂದ ಕಲ್ಯಾಣ ಕೇಂದ್ರ ವೆಬ್‍ಸೈಟ್‍ನಲ್ಲಿ ಅರ್ಜಿಗಳು ಲಭ್ಯವಾಗಲಿದ್ದು, ಅದನ್ನು ಎಲ್ಲ ವಿವರಗಳೊಂದಿಗೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಮೂಲ ಬಂಡವಾಳ 10 ಲಕ್ಷವನ್ನು ಮೀರಿ ಯೋಜನೆಯ ವೆಚ್ಚ ವೃದ್ದಿಸಿದರೆ ಅಂತಹ ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ ಸಾಲ ಕೊಡಿಸಲಾಗುವುದು. ಈವರೆಗೂ ಈ ವಿಸ್ತೃತ ಯೋಜನೆಗೆ 30 ಕಂಪನಿಗಳು ಸಹಿ ಹಾಕಿವೆ. ಎಲ್ಲ ರೀತಿಯಲ್ಲೂ ಎಸ್ಸಿ-ಎಸ್ಟಿ ನಿರುದ್ಯೋಗಿಗಳು ಅನುಕೂಲ ಪಡೆದು ಉದ್ಯೋಗಸ್ಥರಾಗಲು ಇದೊಂದು ಉತ್ತಮ ಅವಕಾಶವಾಗಿದೆ. ಇದನ್ನು ಬಳಸಿಕೊಂಡು ಮುನ್ನಡೆಯುವಂತೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ