ಬೆಂಗಳೂರು,ಅ.30-ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1ರಂದು ಕನ್ನಡ ಅಂದು-ಇಂದು ಮುಂದು ವಿಚಾರ ಸಂಕಿರಣವನ್ನು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಪ್ನ ಬುಕ್ ಹೌಸ್‍ನ ವ್ಯವಸ್ಥಾಪಕ ನಿತಿನ್ ಶಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಮ್ಮ ಬುಕ್ ಹೌಸ್‍ನಲ್ಲಿ ಕನ್ನಡ ಪುಸ್ತಕ ಪ್ರಿಯರಿಗೆ ಸಪ್ನ ಸದಸ್ಯರ ಕಾರ್ಡನ್ನು ನೀಡಲಾಗುವುದು. ಇದರಿಂದ ಒಂದು ವರ್ಷದವರೆಗೂ ಯಾವುದೇ ಪುಸ್ತಕ ಪಡೆದರೂ ಶೇ.10ರಷ್ಟು ರಿಯಾಯ್ತಿ ಗ್ರಾಹಕರು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಪುಸ್ತಕಗಳಿಗೆ ಇಎಂಐ ಸೌಲಭ್ಯ ಕಲ್ಪಿಸಲಾಗಿದ್ದು, ಕನ್ನಡ ಪುಸ್ತಕ ಪ್ರೇಮಿಗಳು ಹೆಚ್ಚಾಗಿ ಇದರ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು.
ವಿಚಾರ ಸಂಕಿರಣವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ.ಚಂದ್ರಶೇಖರ್ ಕಂಬಾರರು ಉದ್ಘಾಟಿಸಲಿದ್ದು, ಪ್ರಸಿದ್ಧ ಕವಿಗಳಾದ ಕೆ.ಎಸ್.ನಿಸಾರ್ ಅಹಮ್ಮದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಂತರ ಸಾಹಿತಿ ದೊಡ್ಡರಂಗೇಗೌಡ ಅವರು ಮಾತನಾಡಿ, ದ.ರಾ.ಬೇಂದ್ರೆ, ಕಾರಂತರು, ಕುವೆಂಪುರವರು ಹೆಚ್ಚಾಗಿ ಕನ್ನಡ ಪುಸ್ತಕಗಳನ್ನು ಓದುತ್ತಿದ್ದರು. ಹೆಚ್ಚು ಕನ್ನಡ ಲೇಖನಗಳನ್ನು ರಚಿಸುತ್ತಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿರುವುದು ವಿಪರ್ಯಾಸ ಎಂದು ಹೇಳಿದರು.
ಕನ್ನಡ ಭಾಷೆ ಎಲ್ಲರ ಮನಮುಟ್ಟುವಂತಾಗಬೇಕು. ಸಪ್ನ ಬುಕ್ ಹೌಸ್‍ನವರು ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದು ಓದುಗರಿಗೆ ಕನ್ನಡ ಪುಸ್ತಕ ಕೈಗೆಟಕುವ ರೀತಿಯಲ್ಲಿ ಮಾಡಿದ್ದಾರೆ. ಇಂತಹ ಯೋಜನೆಗಳು ಇನ್ನಷ್ಟು ರೂಪುಗೊಳ್ಳಲಿ ಎಂದು ಆಶಿಸಿದ ಅವರು, ನಾನು ಸಪ್ನ ಬುಕ್ ಹೌಸ್‍ಗೆ ಆಭಾರಿಯಾಗಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿಗಳಾದ ಹಂಪಾ ನಾಗರಾಜಯ್ಯ, ದೊಡ್ಡೇಗೌಡ ಉಪಸ್ಥಿತರಿದ್ದರು.