ಕೆಣಕಲು ಬರಬೇಡಿ, ಬೇಲ್​ ರದ್ದಾಗಿ ಜೈಲಿಗೆ ಹೋಗಬೇಕಾದೀತು; ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ಎಚ್ಚರಿಕೆ

ಬಾಗಲಕೋಟೆ: ಈಗಾಗಲೇ ನಾನು ಪಾದಯಾತ್ರೆ ನಡೆಸಿದ್ದರಿಂದ ಜೈಲು ಪಾಲಾಗಿ ಸೆರೆವಾಸ ಅನುಭವಿಸಿ ಬಂದಿದ್ದೀರಿ, ತವರಿಗೆ ಹೋಗಲು ಆಗದೆ ಬೇರೆ ಜಿಲ್ಲೆಯಲ್ಲಿ ಸವಾಲು ಹಾಕುತ್ತಿದ್ದೀರಾ. ಇದೇ ರೀತಿ ಮತ್ತೆ ಕೆಣಕಿದರೆ ಮತ್ತೊಮ್ಮೆ ಜಾಮೀನು ರದ್ದಾಗಿ, ಜೈಲಿಗೆ ಹೋಗಬೇಕಾಗುತ್ತದೆ  ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಜನಾರ್ದನ ರೆಡ್ಡಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಜನಾರ್ದನ ರೆಡ್ಡಿ ವಿರುದ್ಧ ತೊಡೆತಟ್ಟಿದ್ದ ಸಿದ್ದರಾಮಯ್ಯ ರೆಡ್ಡಿಯನ್ನು ಜೈಲಿಗೆ ಕಳುಹಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಈಗ ಮತ್ತೆ ಬಳ್ಳಾರಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖಾಮುಖಿಯಾಗಿದ್ದು, ಹಳೆ ಸೇಡನ್ನು ಕೆದುಕಿ,   ಪರಸ್ಪರ ವಾಕ್ಸಾಮರ ನಡೆಸಿದ್ದಾರೆ.
ಬಳ್ಳಾರಿ ಲೂಟಿ ಮಾಡಿದ್ದೇವೆ ಎಂದು ಆರೋಪಿಸುತ್ತಿರಲ್ಲಾ, ನಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆ ಎಷ್ಟು  ಅಭಿವೃದ್ಧಿಯಾಗಿದೆ ಎಂಬುದನ್ನು ಚರ್ಚಿಸಲು ಸಿದ್ಧ, ನೀವು ಸಿದ್ಧವಿದ್ದೀರಾ ಎಂದು ರೆಡ್ಡಿ ಸಹೋದರರು ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ಸಿದ್ದರಾಮಯ್ಯ, ನೀನಂತೂ ಬಳ್ಳಾರಿ, ಬೆಂಗಳೂರಿಗೆ ಬರಲು ಆಗಿಲ್ಲ. ಅದು ಎಲ್ಲಿ ಹೇಳುತ್ತಿಯಾ ಅಲ್ಲಿಗೆ ಬರುತ್ತೀನಿ ಹೇಳು ಎಂದು ಸವಾಲಿಗೆ ಪ್ರತಿಸವಾಲು ಹಾಕಿದ್ದರು.
ಈ ಸವಾಲುಗಳು ಸರಮಾಲೆ ಮುಂದುವರೆದಿದ್ದು, ತಮ್ಮ ಅಧಿಕಾರ ಅವಧಿಯಲ್ಲಿ ಗಣಿ ಸಂಪತ್ತನ್ನು ಲೂಟಿ ಮಾಡಿ ಯಾವ ರೀತಿ ಬಳ್ಳಾರಿಯ ಅಧಿಕಾರ ವರ್ಗ ಮತ್ತು ಜನರಲ್ಲಿ ಆತಂಕ ಮೂಡಿಸಿದ್ದರು ಎಂಬ ಸತ್ಯಾಂಶವನ್ನು ಮಾಜಿ ಸಿಎಂ ಮತ್ತೊಮ್ಮೆ ತೆರೆದಿಟ್ಟು , ರೆಡ್ಡಿಗಳ ವಿರುದ್ಧ ಸಮರ ಸಾರಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡಿದ ನನ್ನನ್ನು ಹೆದರಿಸಲು ರೆಡ್ಡಿ ಸಹೋದರರು ರೌಡಿಗಳನ್ನು ಬಿಟ್ಟಿದ್ದರು.  ಅಂದೇ ಇವರ ಸೊಕ್ಕು ಅಡಗಿಸಬೇಕು ಎಂದು ತೀರ್ಮಾನಿಸಿ, ಪಾದಯಾತ್ರೆ ಮಾಡಲು ನಿರ್ಧರಿಸಿದೆ ಎಂದು  ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದರು.
ರಾಮಘಡ ಬಳಿ ಗಣಿಗಾರಿಕೆ ನಡೆಯುವ ಜಾಗದಲ್ಲಿ ಭಾಷಣಕ್ಕೆ ಹೋದಾಗ ರೆಡ್ಡಿ ಸಹೋದರರು ನನ್ನನ್ನು ರೌಡಿಗಳನ್ನು ಬಿಟ್ಟು ಹೆದರಿಸಲು ಮುಂದಾದರು. ನನ್ನ ಕಾರು ಹಿಂದೆ ಬಂದು ರೌಡಿಗಳು ಕೂಗಿ ಹೆದರಿಸಿದರು. ನಾವು ಹೋಗುವ ದಾರಿಗೆ ಲಾರಿ ತಂದು ರಸ್ತೆಗೆಲ್ಲ ಮಣ್ಣು ಸುರಿದು ಅಡ್ಡಗಟ್ಟಿದರು. ಅಂದೇ ನಾನು ಇವರ ದರ್ಪ ಅಡಗಿಸಬೇಕು ಎಂದು ತೀರ್ಮಾನ ಮಾಡಿದೆ. ವಿಧಾನಸಭೆಯಲ್ಲಿ ಜನಾರ್ದನ ರಡ್ಡಿ, ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ತೊಡೆ ತಟ್ಟಿ ಪಾದಯಾತ್ರೆ ನಡೆಸಲು ಸಜ್ಜಾದೆ ಎಂದರು.
ಇನ್ನು 16 ದಿನಗಳ ಕಾಲ ಪಾದಯಾತ್ರೆ ನಡೆಸಿದ್ದ ನಾವು ಬಳ್ಳಾರಿ ತಲುಪಿದಾಗ ಬಹಿರಂಗ ಸಭೆಯಲ್ಲಿ ಚರ್ಚೆ ನಡೆಸಲು ಸಿದ್ದವಾದೆವು. ಆದರೆ ರೆಡ್ಡಿ ಸಹೋದರರಿಗೆ ಹೆದರಿ  ಅಲ್ಲಿನ ಜಿಲ್ಲಾಧಿಕಾರಿ ನಮಗೆ ಶಾಮಿಯಾನ ಹಾಕಲು ಜಾಗ ಕೊಟ್ಟಿರಲಿಲ್ಲ. ಜನ ಕೂಡ ಹೆದರಿ ಸಭೆಗೆ ಬರಲಿಲ್ಲ . ಲೋಕಾಯುಕ್ತ ಸಂತೋಷ್​ ಹೆಗ್ಡೆ ವರದಿ ನೀಡಿದಂತೆ ಅದು ಬಳ್ಳಾರಿ ರಿಪಬ್ಲಿಕ್​ ಆಗಿತ್ತು ಎಂದು ಹಳೆಯ ಘಟನೆಯನ್ನು ಜನರ ಮುಂದಿಟ್ಟರು.
ನಾವು ಪಾದಯಾತ್ರೆ ಮಾಡದಿದ್ದರೆ ರೆಡ್ಡಿ ಜೈಲಿಗೆ ಹೋಗುತ್ತಿರಲಿಲ್ಲ. ನಿವೃತ್ತ ಲೋಕಾಯುಕ್ತ ಸಂತೋಷ್​ ಹೆಗ್ಡೆ ವರದಿಯಂತೆ ಬಳ್ಳಾರಿ ಪ್ರತ್ಯೇಕ ದೇಶವೇ ಆಗಿಹೋಗಿತ್ತು.  ಅಲ್ಲಿನ ಜನ ನಿರ್ಭಯವಾಗಿರಲು ಸಾಧ್ಯವಾಗುರುತ್ತಿರಲಿಲ್ಲ. ಈಗ ಜನರು ಪ್ರಜಾಪ್ರಭುತ್ವದಲ್ಲಿ ಜೀವಿಸುವಂತೆ ಆಗಿದೆ ಎಂದು ರೆಡ್ಡಿಗಳ ಸರ್ವಾಧಿಕಾರಿ ಆಡಳಿತದ ಬಗ್ಗೆ ವಿವರಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ