ಬೆಂಗಳೂರು, ಅ.29- ಸುಮಾರು 12 ವರ್ಷಗಳ ನಂತರ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ವೇದಿಕೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಯುಗ ಆರಂಭಿಸಿದ್ದಾರೆ.
ಐದು ಕ್ಷೇತ್ರಗಳ ಉಪ ಚುನಾವಣೆ ಜಾತ್ಯಾತೀತ ಮತಗಳ ಸಮೀಕರಣಕ್ಕೆ ಬಲವಾದ ವೇದಿಕೆ ಒದಗಿಸಿಕೊಟ್ಟಿದೆ. ಸಿದ್ದರಾಮಯ್ಯ ಮತ್ತು ದೇವೇಗೌಡರು ಇತ್ತೀಚೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಹತ್ತಾರು ವರ್ಷಗಳ ವೈಮನಸ್ಸನ್ನು ಮರೆತು ರಾಜಕೀಯವಾಗಿ ಕೈಜೋಡಿಸಿದರು. ಅಷ್ಟಕ್ಕೆ ನಿಲ್ಲದೆ ಈಗ ಬಹಿರಂಗ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಕೆಳಹಂತದ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನಿಸುತ್ತಿದ್ದಾರೆ.
2018ರ ವಿಧಾನಸಭೆ ಚುನಾವಣೆ ನಂತರ ರಾಜಕೀಯ ಅತಂತ್ರಸ್ಥಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಆದರೂ ಕೆಳಹಂತದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮಾನಸಿಕವಾಗಿ ಒಗ್ಗೂಡಲು ಸಾಧ್ಯವಾಗಿರಲಿಲ್ಲ.
ತಳಮಟ್ಟದ ಸಂಘರ್ಷಗಳು ಯಥಾರೀತಿ ಮುಂದುವರೆದಿದ್ದರೂ ಅವುಗಳಿಗೆ ಕಡಿವಾಣ ಹಾಕುವ ಸಲುವಾಗಿ ದೇವೇಗೌಡರು ಮತ್ತು ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು.
ಆನಂತರ ದೇವೇಗೌಡರು ವಿದೇಶ ಪ್ರವಾಸ ಕೈಗೊಳ್ಳಬೇಕಿದ್ದರಿಂದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸ್ವದೇಶಕ್ಕೆ ಮರಳಿದ ನಂತರ ಗಣಿದಣಿಗಳ ನಾಡು ಬಳ್ಳಾರಿಯಿಂದಲೇ ದೇವೇಗೌಡರು ರಣಕಹಳೆ ಊದುತ್ತಿದ್ದಾರೆ.
ಈಗಾಗಲೇ ರಾಮನಗರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪ್ರಚಾರ ನಡೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಳ್ಳಾರಿ ಕಣದಲ್ಲಿ ಜನರ ಮನವೊಲಿಕೆಗೆ ಮುಂದಾಗಿದ್ದಾರೆ. ಅವರೊಂದಿಗೆ ಅದೇ ವೇದಿಕೆಯಲ್ಲಿ ಜೆಡಿಎಸ್ ನಾಯಕರೂ ಕೂಡ ಕಾಣಿಸಿಕೊಳ್ಳುತ್ತಿರುವುದು ರಾಜಕೀಯ ಶಕ್ತಿಯ ದೃವೀಕರಣಕ್ಕೆ ಮತ್ತಷ್ಟು ಬಲಬಂದಂತಾಗಿದೆ.
ನಾಳೆ ಶಿವಮೊಗ್ಗದಲ್ಲಿ ನಡೆಯಲಿರುವ ಬಹಿರಂಗ ಪ್ರಚಾರದಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯ ಕಾಣಿಸಿಕೊಳ್ಳಬೇಕಿತ್ತು. ಆದರೆ, ಒಂದು ದಿನ ಮೊದಲೇ ಗುರು, ಶಿಷ್ಯರು ಬಳ್ಳಾರಿಯಲ್ಲಿಂದು ಸಮಾಗಮಗೊಳ್ಳುತ್ತಿದ್ದಾರೆ.
ಗಟ್ಟಿಗೊಳ್ಳುತ್ತಿರುವ ದೋಸ್ತಿ ಸಂಕಲ್ಪ:
ಉಪ ಚುನಾವಣೆ ಕಣಗಳ ಹೊರತಾಗಿಯೂ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹೆಚ್ಚು ಬಲಗೊಳ್ಳುತ್ತಿದೆ. ಈವರೆಗೂ ಹಾವು-ಮುಂಗುಸಿಯಂತೆ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಂಡು ಜಗಳವಾಡುತ್ತಿದ್ದ ಈ ಎರಡೂ ಪಕ್ಷಗಳ ನಾಯಕರು ಮೈತ್ರಿ ಸರ್ಕಾರದ ನಂತರ ಎಲ್ಲಾ ವೈಮನಸ್ಯಗಳನ್ನು ಮರೆತು ಪರಸ್ಪರ ಹೊಗಳಿಕೊಳ್ಳಲು ಆರಂಭಿಸಿದ್ದಾರೆ.
ಚುನಾವಣಾ ಕಣದಲ್ಲಿ ಬಿಜೆಪಿಯನ್ನು ಟೀಕಿಸುವುದು ಏಕಮಾತ್ರ ಗುರಿಯಾಗಿದ್ದು, ಎರಡೂ ಪಕ್ಷಗಳ ನಾಯಕರು ಪರಸ್ಪರ ಹೊಗಳಿಕೊಳ್ಳಲಾರಂಭಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಹಿಂದುಳಿದವರ್ಗಗಳ ನಾಯಕ ಎಂದು ಕೊಂಡಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನಪರ ಯೋಜನೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ರಾಜಕೀಯ ವೈಷಮ್ಯವನ್ನು ತಣ್ಣಗೆ ಮಾಡುವ ಪ್ರಯತ್ನವಾಗಿದ್ದು, ಅದು ಎಷ್ಟು ಪ್ರಭಾವ ಬೀರಲಿದೆ ಎಂಬುದನ್ನು ಉಪಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ.
ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರ ಸಮಾಗಮ ಕೇವಲ ರಾಜ್ಯ ರಾಜಕಾರಣದಲ್ಲಷ್ಟೇ ಅಲ್ಲ. ದೇಶದ ರಾಜಕಾರಣದಲ್ಲೂ ಗಮನ ಸೆಳೆದಿದೆ. ಉತ್ತರ ಪ್ರದೇಶ ಹೊರತು ಪಡಿಸಿ ಉಳಿದ ಯಾವುದೇ ರಾಜ್ಯಗಳಲ್ಲಿ ಈ ರೀತಿಯ ಜಾತ್ಯಾತೀತ ಪಕ್ಷಗಳ ಸಮೀಕರಣ ನಡೆದಿಲ್ಲ.
ಕರ್ನಾಟಕ, ಮಹಾಘಟ್ಬಂಧನ್ಗೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಇದನ್ನು ಜನ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಆಧರಿಸಿ ದೇಶದ ಇತರೆ ರಾಜ್ಯಗಳಲ್ಲೂ ರಾಜಕೀಯ ಸಮೀಕರಣ ಆರಂಭಗೊಳ್ಳುವ ನಿರೀಕ್ಷೆಗಳಿವೆ.