ನವದೆಹಲಿ: ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರನ್ನು ನವೆಂಬರ್ 1ರ ವರೆಗೆ ಬಂಧಿಸದಂತೆ ದೆಹಲಿ ಹೈಕೋರ್ಟ್ ಸಿಬಿಐಗೆ ಆದೇಶಿಸಿದೆ.
ರಾಕೇಶ್ ಆಸ್ಥಾನಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.ಈ ನಿಟ್ಟಿನಲ್ಲಿ ರಾಕೇಶ್ ಆಸ್ಥಾನಾ ಅವರು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ತನ್ನನ್ನು ಬಂಧಿಸದಂತೆ ಮತ್ತು ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಆಸ್ಥಾನಾ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮತ್ತು ನವೆಂಬರ್ 1ರ ವರೆಗೆ ಬಂಧಿಸದಂತೆ ಸೂಚಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಜಿಮಿ ವಜಿರಿ ಅವರು, ನವೆಂಬರ್ 1ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ಈಗಾಗಲೇ ರಾಕೇಶ್ ಅಸ್ತಾನ ವಿರುದ್ಧ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲು ಮುಂದಾಗಿದ್ದರು. ಈ ಹಿನ್ನೆಲ್ಲೆಯಲ್ಲಿ ಬಂಧನದ ಭೀತಿಯಲ್ಲಿರುವ ಆಸ್ತಾನ ಕೋರ್ಟ್ ಮೊರೆ ಹೋಗಿದ್ದು, ಪ್ರಕರಣ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.