ಬೆಂಗಳೂರು, ಅ.28- ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಗೆ ಸಕ್ರಮಗೊಂಡಿರುವ ನೌಕರರನ್ನು ಮೂರು ತಿಂಗಳೊಳಗಾಗಿ ಮರು ವಿನ್ಯಾಸಗೊಳಿಸದಿದ್ದರೆ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡುವ ಎಚ್ಚರಿಕೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನೀಡಿದೆ.
ಕಳೆದ 1990ರ ಆಗಸ್ಟ್ 8ರ ಆದೇಶದನ್ವಯ ದಿನಗೂಲಿ ಸೇವೆಯಿಂದ ಸರ್ಕಾರಿ ಸೇವೆಗೆ ಸಕ್ರಮಗೊಂಡು ಇದುವರೆಗೂ ಸಂಖ್ಯಾತಿರಿಕ್ತ ಹುದ್ದೆಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಮುಂದಿನ ಮೂರು ತಿಂಗಳೊಳಗಾಗಿ ಖಾಲಿ ಇರುವ ತತ್ಸಮಾನ ಹುದ್ದೆಗಳಿಗೆ ಮರು ವಿನ್ಯಾಸಗೊಳಿಸಬೇಕು. ಒಂದು ವೇಳೆ ಖಾಲಿ ಹುದ್ದೆಗಳು ಲಭ್ಯವಿಲ್ಲದೇ ಇದ್ದ ಪಕ್ಷದಲ್ಲಿ ಸರ್ಕಾರಿ ಆದೇಶದಂತೆ ಜಿಲ್ಲಾಧಿಕಾರಿಗಳ ಮೂಲಕ ಇತರೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮರು ವಿನ್ಯಾಸಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
ಸಂಖ್ಯಾತಿ ರಿಕ್ತ ಹುದ್ದೆಯಲ್ಲಿರುವ ನೌಕರರನ್ನು ಮರು ವಿನ್ಯಾಸಗೊಳಿಸಲು ವಿಳಂಬವಾದರೂ ಸಹ ಈ ನೌಕರರು ಕಡ್ಡಾಯವಾಗಿ ಮುಂದಿನ ಎರಡು ವರ್ಷಗಳೊಳಗಾಗಿ ಮರು ವಿನ್ಯಾಸಗೊಂಡ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ತೆಗೆದುಕೊಂಡು ತೇರ್ಗಡೆಹೊಂದಬೇಕು.
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗೆ ನಿಗದಿಪಡಿಸಿರುವ ಇಲಾಖೆ ಪರೀಕ್ಷೆಗಳನ್ನು ಹಾಗೂ ಕನ್ನಡ ಭಾಷಾ ಪರೀಕ್ಷೆಯನ್ನು ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಇಲ್ಲವಾದಲ್ಲಿ ಅಂತಹ ನೌಕರರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಸಕ್ಷಮ ಪ್ರಾಧಿಮಾರಿಗಳು ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸಂಖ್ಯಾತಿರಿಕ್ತ ಹುದ್ದೆಗಳು ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಮಂಜೂರಾದ ಹುದ್ದೆಗಳಾಗಿರುವುದಿಲ್ಲ. ಇದರಿಂದ ಸಂಖ್ಯಾತಿರಿಕ್ತ ಹುದ್ದೆಯಲ್ಲಿರುವ ನೌಕರರನ್ನು ಯಾವುದೇ ಒಂದು ಇಲಾಖೆಯ ಸೇವೆಗೆ ಮರು ವಿನ್ಯಾಸಗೊಳಿಸುವ ವರೆಗೂ ಕಾಲಬದ್ಧ ವೇತನ ಬಡ್ತಿಯನ್ನಾಗಲಿ ಸ್ವಯಂ ಚಾಲಿತ ವೇತನ ಬಡ್ತಿಯನ್ನಾಗಲಿ ಹೆಚ್ಚುವರಿ ವೇತನ ಬಡ್ತಿಯನ್ನಾಗಲಿ ಮಂಜೂರು ಮಾಡುವಂತಿಲ್ಲ. ಎಲ್ಲಾ ಇಲಾಖೆಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗಳು ಮೇಲಿನ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.