
ಬೆಂಗಳೂರು, ಅ.28- ನನ್ನ ಆಡಳಿತಾವಧಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಕಸಮುಕ್ತ ನಗರವನ್ನಾಗಿ ಮಾಡಲು ಪಣ ತೊಟ್ಟಿದ್ದೇನೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಬಸವ ಭವನದ ಅರಿವನ ಮನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಬಿಬಿಎಂಪಿ ಮಹಾ ಪೌರರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮೇಯರ್ ಮಾತನಾಡಿದರು.
ಬಿಬಿಎಂಪಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ತೆರಿಗೆ ಕ್ರೋಢೀಕರಣ ಸೋರಿಕೆಯಾಗುತ್ತಿದೆ. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಇದನ್ನು ಸರಿಪಡಿಸುತ್ತೇನೆ ಎಂದು ತಿಳಿಸಿದರು.
ನಗರವನ್ನು ಅಭಿವೃದ್ಧಿ ಮಾಡಿ ಸ್ವಚ್ಛ ನಗರ ಮಾಡುತ್ತೇನೆ. ಬರೀ ಮಾತುಗಳಲ್ಲಿ ಆಶ್ವಾಸನೆ ಕೊಡದೆ ನನ್ನ ಶಕ್ತಿ ಮೀರಿ ಶೀಘ್ರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮ್ದಾರ್ ಮಾತನಾಡಿ, ಇದೇ ಮೊದಲ ಬಾರಿಗೆ ನಮ್ಮ ಸಮುದಾಯದಿಂದ ಮಹಿಳೆಯೊಬ್ಬರು ಮಹಾಪೌರರಾಗಿ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ. ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿದ್ದಾರೆ. ಅದಕ್ಕಾಗಿ ಅಭಿನಂದನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ನಗರದ ಕೆಲವು ವೃತ್ತಗಳಿಗೆ ಅಕ್ಕ ಮಹಾದೇವಿ, ಅಲ್ಲಮಪ್ರಭು, ಬುದ್ಧ, ಬಸವ ಮುಂತಾದ ಮಹಾಮಹಿಮರ ಹೆಸರು ನಾಮಕರಣ ಮಾಡಬೇಕೆಂದು ಮಹಾಪೌರರಲ್ಲಿ ಮನವಿ ಮಾಡಿದರು.
ಗಂಗಾಂಬಿಕೆ ಅವರು ಎಲ್ಲರಪ್ರೀತಿಗೆ ಪಾತ್ರರಾಗಿದ್ದಾರೆ. ಇವ
ಮಹಿಳಾ ಪ್ರತಿನಿಧಿಯಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ತಾವು ಬೆಳೆಯುವುದರ ಜತೆಗೆ ನಮ್ಮ ಸಮಾಜದ ಬೆಳವಣಿಗೆಗೂ ಕೆಲಸ ಮಾಡಬೇಕು ಎಂದು ಜಾಮ್ದಾರ್ ಕೋರಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಲಿಂಗಾಯತ ಹೋರಾಟ ಪ್ರಶ್ನೆ ಪರಿಹಾರ ಎಂಬ ಪುಸ್ತಕವನ್ನು ಕಾರ್ಯಕ್ರಮದ ವೇಳೆ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಬೇಲಿ ಮಠ ಸಂಸ್ಥಾನದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಬಸವ ಸಮಿತಿ ಅಧ್ಯಕ್ಷ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಹಿರಿಯ ಉಪಾಧ್ಯಕ್ಷ ಅರವಿಂದ ಜತ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.