ಕಸ ತೆರವು ಕಾರ್ಯಾಚರಣೆ ಖುದ್ದು ಪರಿಶೀಲಿಸಿದ ಮೇಯರ್ ಗಂಗಾಂಬಿಕೆ

ಬೆಂಗಳೂರು, ಅ.27- ಮೇಯರ್ ಗಂಗಾಂಬಿಕೆ ಅವರು ನಗರದ ವಿವಿಧ ರಸ್ತೆಗಳಲ್ಲಿ ಬಿದ್ದಿದ್ದ ರಾಶಿ ರಾಶಿ ಕಸ ತೆರವು ಕಾರ್ಯಾಚರಣೆಯನ್ನು ಖುದ್ದು ಪರಿಶೀಲನೆ ನಡೆಸಿದರು.

ಸಿಲ್ಕ್‍ಬೋರ್ಡ್ ಜಂಕ್ಷನ್‍ನಿಂದ ಮಾರತ್ತಹಳ್ಳಿ ಮಾರ್ಗದಲ್ಲಿ ತಪಾಸಣೆ ನಡೆಸಿದ ಮೇಯರ್ ಅವರು ಕೆಆರ್ ಪುರಂ, ಹೊರವರ್ತುಲ ರಸ್ತೆ, ಹಳೆ ಮದ್ರಾಸ್ ರಸ್ತೆಯಲ್ಲಿ ಸಂಗ್ರಹವಾಗಿದ್ದ ರಾಶಿ ರಾಶಿ ಕಸ ಕಂಡು ಕೆಂಡಾಮಂಡಲರಾದ ಮೇಯರ್ ಅವರು ಖುದ್ದು ಸ್ಥಳದಲ್ಲೇ ನಿಂತು ಬಿದ್ದಿದ್ದ ರಾಶಿ ರಾಶಿ ಕಸವನ್ನು ತೆರವುಗೊಳಿಸಿದರು.

ನಂತರ ಹಲಸೂರು ಕೆರೆ ಕಲ್ಯಾಣಿಯಲ್ಲಿ ಶೇಖರಣೆಯಾಗಿದ್ದ ಗಣೇಶಮೂರ್ತಿಗಳ ಅವಶೇಷಗಳನ್ನು ಈ ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸುರಂಜನ್‍ದಾಸ್ ರಸ್ತೆಯಲ್ಲಿ ಬಿದ್ದಿದ್ದ ಮೆಡಿಕಲ್ ವೆಸ್ಟ್‍ಅನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಮೇಯರ್ ಅವರು ಆದೇಶಿಸಿದರು.
ನಂತರ ಹೊಸಕೆರೆಹಳ್ಳಿ, ಕದಿರೇನಹಳ್ಳಿ ಕ್ರಾಸ್ ಸಮೀಪದ ಇಂದಿರಾ ಕ್ಯಾಂಟಿನ್ ಬಳಿ ಹಾಗೂ ಸೀತಾ ಸರ್ಕಲ್‍ನ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸವನ್ನು ತೆರವುಗೊಳಿಸುವಂತೆ ಮೇಯರ್ ಸೂಚಿಸಿದರು.

ಫಲಶೃತಿ: ದಸರಾ ಹಬ್ಬದ ಕಸವನ್ನು ಕೂಡಲೇ ತೆರವುಗೊಳಿಸುವಂತೆ ಮೇಯರ್ ಗಂಗಾಂಬಿಕೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಕಾಮಾಕ್ಷಿಪಾಳ್ಯದಲ್ಲಿ ಮೇಯರ್ ಸೂಚನೆ ನಂತರವೂ ಕಸ ತೆರವುಗೊಳಿಸದಿರುವ ಬಗ್ಗೆ ಪತ್ರಿಕೆಯೊಂದರಲ್ಲಿ ಮೇಯರ್ ಮಾತಿಗೆ ಕಿಮ್ಮತ್ತಿಲ್ಲ ಎಂದು ವರದಿ ಪ್ರಕಟವಾದದ್ದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಎಚ್ಚರಿಕೆ ನೀಡಿದ ನಂತರ ಕಾಮಾಕ್ಷಿಪಾಳ್ಯದ ರಸ್ತೆಯಲ್ಲಿ ಸಂಗ್ರಹವಾಗಿದ್ದ ರಾಶಿ ಕಸಕ್ಕೆ ಮುಕ್ತಿ ಸಿಕ್ಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ