ಬೆಂಗಳೂರು, ಅ.27- ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆಗಾಗಿ ಬರುವವರ ಅನುಕೂಲಕ್ಕಾಗಿ ಪ್ರತಿದಿನ 24 ಗಂಟೆಗಳ ಕಾಲ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿರುತ್ತದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕರಾದ ಡಾ.ಸುಜಾತಾ ರಾಥೋಡ್, ದೀಪಾವಳಿ ಹಬ್ಬದ ದಿನಗಳಲ್ಲಿ ಪ್ರತಿದಿನ 24 ಗಂಟೆ ಕಾಲ ನಿರಂತರವಾಗಿ ಕಣ್ಣಿನ ಚಿಕಿತ್ಸೆಗೆ ದಾಖಲಾಗುವವರಿಗೆ ಪೂರ್ಣ ಪ್ರಮಾಣದ ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ ವೈದ್ಯ ವಿದ್ಯಾರ್ಥಿಗಳು ಹಾಜರಿರುತ್ತಾರೆ.
ಚಿಕಿತ್ಸೆಗೆ ಬೇಕಾದ ಔಷಧ, ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗುತ್ತದೆ. ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗುತ್ತದೆ ಎಂದು ಅವರು ಹೇಳಿದರು.
ಪರಿಸರಕ್ಕೆ ಮಾರಕವಾದ ವಾಯುಮಾಲಿನ್ಯ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಪಟಾಕಿ ಸುಡುವುದರ ಕುರಿತು ಮುನ್ನೆಚ್ಚರಿಕೆ ಕೈಗೊಳ್ಳುವುದು ಸೂಕ್ತ. ಒಂದು ಬಾರಿ ಕಣ್ಣಿನ ನರಕ್ಕೆ ಹಾನಿ ಉಂಟಾದರೆ ಮತ್ತೆ ಸರಿಪಡಿಸುವುದಿಲ್ಲ. ಪಟಾಕಿಯಿಂದ ಹೊರಬರುವ ರಾಸಾಯನಿಕ ವಸ್ತುಗಳು ಕಣ್ಣಿಗೆ ಹಾನಿಕಾರಕವಾಗಿದೆ.
ಹೂಕುಂಡದಂತಹ ಪಟಾಕಿಗಳಿಂದ ಹೆಚ್ಚು ಹಾನಿಯಾಗುತ್ತದೆ. ಪ್ರತಿಷ್ಠಿತ ಮಿಂಟೋ ಆಸ್ಪತ್ರೆಗೆ ಸರಾಸರಿ 50 ರಿಂದ 60 ಮಂದಿ ಕಣ್ಣಿನ ಚಿಕಿತ್ಸೆಗೆ ದಾಖಲಾಗುತ್ತಾರೆ. ಇದೇ ರೀತಿ ವಿವಿಧ ಆಸ್ಪತ್ರೆಗಳಿಗೂ ದಾಖಲಾಗುತ್ತಾರೆ.
ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಕಣ್ಣಿಗೆ ಹಾನಿಯಾದ 65 ಪ್ರಕರಣಗಳು ದಾಖಲಾಗಿದ್ದವು. ಕೆಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರೆ, ಇನ್ನೂ ಕೆಲವರಿಗೆ ಒಳರೋಗಿಗಳಾಗಿ ಚಿಕಿತ್ಸೆ ನೀಡಲಾಗಿತ್ತು.
14 ವರ್ಷದೊಳಗಿನ ಶೇ.40ರಷ್ಟು ಮಕ್ಕಳು ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ಗಂಡು ಮಕ್ಕಳೇ ಹೆಚ್ಚು. ಮನರಂಜನೆಗಾಗಿ ಪಟಾಕಿ ಸಿಡಿಸುವಾಗ ಕನ್ನಡಕ, ಹೆಲ್ಮೆಟ್ ಅಥವಾ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳುವುದು ಸೂಕ್ತ. ಚಿಕ್ಕವರು, ದೊಡ್ಡವರ ಮಾರ್ಗದರ್ಶನದಲ್ಲಿ ಪಟಾಕಿ ಸಿಡಿಸುವುದು ಸೂಕ್ತ ಎಂದರು.
ಪಟಾಕಿ ಸಿಡಿಸುವಾಗ ಕಣ್ಣಿಗೆ ಹಾನಿಯಾದರೆ ಯಾವುದೇ ಕಾರಣಕ್ಕೂ ಮುಚ್ಚಬಾರದು. ಔಷಧೋಪಚಾರ ಮಾಡದೆ, ಶುದ್ಧವಾದ ಬಟ್ಟೆಯನ್ನು ಹಗುರವಾಗಿ ಕಟ್ಟಿಕೊಳ್ಳಬೇಕು. ನಂತರ ಹತ್ತಿರದ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ.
ಪಟಾಕಿ ಸಿಡಿಸುವುದರಿಂದ ಶಬ್ದ ಮಾಲಿನ್ಯ, ವಾಹು ಮಾಲಿನ್ಯ ಉಂಟಾಗುವುದಲ್ಲದೆ ಕೆಲವು ಸಂದರ್ಭದಲ್ಲಿ ಜನರ ಪ್ರಾಣಕ್ಕೂ ತೊಂದರೆಯಾಗುತ್ತದೆ. ಆಸ್ತಮಾದಂತಹ ರೋಗಗಳು ಉಲ್ಬಣಿಸುತ್ತವೆ. ಪ್ರಾಣಿ-ಪಕ್ಷಿಗಳು ಜೀವಭಯದಿಂದ ಜೀವನ ನಡೆಸುವಂತಾಗುತ್ತದೆ ಎಂದರು.
ಇದೆಲ್ಲದರ ನಡುವೆ ಪರಿಸರ ನಾಶವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅವರು ಹೇಳಿದರು.
ಪಟಾಕಿ ಹಾನಿ-ಸುರಕ್ಷತೆ ಬಗ್ಗೆ ಉತ್ತಮ ಲೇಖನ ಬರೆದ ವಿದ್ಯಾರ್ಥಿನಿ ಇಂಚರಾ ಅವರನ್ನು ಗೌರವಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಆಪ್ತಮಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ದಾಕ್ಷಾಯಿಣಿ ಉಪಸ್ಥಿತರಿದ್ದರು.