ಬೆಂಗಳೂರು, ಅ.26-ಗಣಿಗಾರಿಕೆ ಮತ್ತು ಗಣಿ ಸುರಕ್ಷತಾ ಕ್ರಮಗಳ ಬಗ್ಗೆ ಕಲ್ಲು ಗಣಿ ಗುತ್ತಿಗೆದಾರರು ಹಾಗೂ ಅವರ ಪ್ರತಿನಿಧಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಇಂದು ಚಾಲನೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೊದಲ ಹಂತದಲ್ಲಿ ಬೆಂಗಳೂರು ವಲಯದ ಗಣಿ ಗುತ್ತಿಗೆದಾರರು ಹಾಗೂ ಹೊಸದಾಗಿ ಗಣಿ ಗುತ್ತಿಗೆ ಪ್ರಾರಂಭಿಸುವವರಿಗೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮವನ್ನು ಇಂದು ಆಯೋಜಿಸಿದ್ದು, ಆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು, ಕಲ್ಲಿ ಗಣಿಗಾರಿಕೆ ಸೇರಿದಂತೆ ಗಣಿಗಾರಿಕೆ ನಡೆಸುವಾಗ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಲಹೆ ಮಾಡಿದರು.
ಗಣಿ ಮತ್ತು ಭೂ ವಿಜ್ಞಾನ ಕಾಯ್ದೆ ಮತ್ತು ನಿಯಮಗಳ ಅನ್ವಯ ಗಣಿ ಸುರಕ್ಷತಾ ವಿಧಾನಗಳನ್ನು ಅಳವಡಿಸಿ ಪರಿಸರ ರಕ್ಷಣೆ ಮಾಡುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡುತ್ತಿದ್ದು, ಇದರ ಸದ್ಬಳಕೆಯನ್ನು ಗಣಿ ಗುತ್ತಿಗೆದಾರರು ಪಡೆದುಕೊಳ್ಳಬೇಕೆಂದು ಸಲಹೆ ಮಾಡಿದರು.
ಗಣಿಗಾರಿಕೆ ಮಾಡುವ ಸಂದರ್ಭದಲ್ಲಿ ಬಳಕೆ ಮಾಡುವ ಸ್ಫೋಟಕದಿಂದ ಉಂಟಾಗುವ ಪರಿಸರ ಹಾನಿ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಮಾಹಿತಿ ಒದಗಿಸಲಾಯಿತು.
ಅಲಂಕಾರಿಕ ಶಿಲೆ, ಕಟ್ಟಡ, ಕಲ್ಲು ಗಣಿ ಗುತ್ತಿಗೆದಾರರಿಗೆ ಇಂದು ತರಬೇತಿ ನೀಡಿ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಖೆಯ ಹೆಚ್ಚುವರಿ ನಿರ್ದೇಶಕ ಪಾಂಡುರಂಗ, ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಜಿಯಾಲಜಿಕಲ್ ಸೋಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿ ಆರ್.ಸಾಹುಕಾರ್ ಮತ್ತಿತರರು ಪಾಲ್ಗೊಂಡಿದ್ದರು.