ಲೇವಡಿಗೀಡಾದ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ಅ.26- ಕೇಂದ್ರ ಸರ್ಕಾರ ಸಿಬಿಐ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿರುವ ಸಿಬಿಐ ಕಚೇರಿ ಎದುರು ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಕಾಟಾಚಾರದ ಹೋರಾಟವಾಗಿ ಲೇವಡಿಗೀಡಾಯಿತು.
ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಹಾಜರಾದರೂ ಬೆಂಗಳೂರಿನ ಯಾವ ಶಾಸಕರು, ವಿಧಾನಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸದೆ ನಿರಾಸಕ್ತಿ ತೋರಿಸಿದರು.

ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಾಗಿದ್ದ ಪ್ರತಿಭಟನೆ ಬಹಳಷ್ಟು ವಿಳಂಬವಾಗಿ ಆರಂಭವಾಯಿತು. ವಿಳಂಬವಾದರೂ ಜನರ ಸಂಖ್ಯೆ ಅತ್ಯಂತ ವಿರಳವಾಗಿತ್ತು. ಕಾರ್ಯಕರ್ತರಿಗೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿಲ್ಲ ಎಂಬ ಸಮಜಾಯಿಷಿ ನೀಡಲಾಯಿತು.
ಆದರೆ, ಪ್ರಮುಖ ಮುಖಂಡರು, ವಿಧಾನಸಭೆ ಹಾಗೂ ವಿಧಾನಪರಿಷತ್‍ನ ಸದಸ್ಯರೂ ಕೂಡ ಪ್ರತಿಭಟನೆಯತ್ತ ತಲೆ ಹಾಕಲಿಲ್ಲ. ಇದರಿಂದ ಮುಜುಗರಕ್ಕೊಳಗಾದ ವೇಣುಗೋಪಾಲ್ ಅವರು, ಕೆಲವೇ ನಿಮಿಷಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅಲ್ಲಿಂದ ತೆರಳಿದರು.

ದೇಶಾದ್ಯಂತ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಬೆಂಗಳೂರಿನಲ್ಲೂ ಕೆಲ ನಿಮಿಷಗಳ ಕಾಟಾಚಾರಕ್ಕೆ ಪ್ರತಿಭಟನೆ ಮಾಡಿ ಕಾಂಗ್ರೆಸ್ ನಾಯಕರು ಕೈ ತೊಳೆದುಕೊಂಡರು.
ವೇಣುಗೋಪಾಲ್ ಜತೆ ಪ್ರಮುಖರಾದ ವಿ.ಆರ್.ಸುದರ್ಶನ್, ಬಿ.ಎಲ್.ಶಂಕರ್, ಎ.ಬಿ.ಮಾಲಕರೆಡ್ಡಿ ಸೇರಿದಂತೆ ಕೆಲವೇ ಕೆಲವು ಮುಖಂಡರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವೇಣುಗೋಪಾಲ್ ಅವರು, ಸಿಬಿಐ ರಫೈಲ್ ಹಗರಣದ ದಾಖಲೆ ಪತ್ರಗಳನ್ನು ಸಂಗ್ರಹಿಸಲು ಮುಂದಾಗಿದ್ದರಿಂದಾಗಿ ಮೋದಿ ಅವರು ಏಕಾಏಕಿ ನಿರ್ದೇಶಕರನ್ನು ಅವಧಿಗೂ ಮುನ್ನವೇ ಎತ್ತಂಗಡಿ ಮಾಡಿದ್ದಾರೆ. ಸ್ವಾಯತ್ತ ಸಂಸ್ಥೆಯಾದ ಕೇಂದ್ರ ತನಿಖಾ ದಳಕ್ಕೆ ನಿರ್ದೇಶಕರನ್ನು ಸಂವಿಧಾನ ಬದ್ಧವಾಗಿಯೇ ನೇಮಕಾತಿ ಮಾಡಲಾಗುತ್ತದೆ. ಅವರನ್ನು ಏಕಾಏಕಿ ತೆಗೆದು ಹಾಕಲಾಗಿದೆ. ಎರಡನೇ ಹಂತದ ಇಬ್ಬರು ಅಧಿಕಾರಿಗಳಿಗೆ ಕಡ್ಡಾಯ ರಜೆ ಕೊಟ್ಟು ಕಳುಹಿಸಲಾಗಿದೆ. ಮೂರನೇ ಸಾಲಿನ ಅಧಿಕಾರಿಗಳನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಆ ರಾತ್ರಿಯೇ 10ಮಂದಿ ಸಿಬಿಐ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇತಿಹಾಸದಲ್ಲೇ ಈ ರೀತಿಯ ಅಧಿಕಾರ ದುರ್ಬಳಕೆ ಎಂದೂ ನಡೆದಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಸಿಬಿಐ ಸಂಸ್ಥೆ ಬಗ್ಗೆ ಜನಸಮಾನ್ಯರಲ್ಲಿ ಅಪಾರವಾದ ನಂಬಿಕೆ ಮತ್ತು ನಿರೀಕ್ಷೆಗಳಿವೆ. ಆದರೆ, ಕೇಂದ್ರ ಸರ್ಕಾರದ ನಡವಳಿಕೆಗಳು ಅದನ್ನು ಹಾಳುಗೆಡಹುತಿವೆ. ಕಾಂಗ್ರೆಸ್ ಇದನ್ನು ಅಷ್ಟಕ್ಕೇ ಬಿಡುವುದಿಲ್ಲ. ಹೋರಾ ಮುಂದುವರೆಸಲಿದೆ. ಸಿಬಿಐ ಅಧಿಕಾರಿಗಳ ಸ್ಥಾನ ಪಲ್ಲಟದ ಬಗ್ಗೆ ಕಾನೂನು ಹೋರಾಟವನ್ನೂ ಮುಂದುವರೆಸಲಿದೆ ಮತ್ತು ಜನರ ಬಳಿಗೂ ಈ ವಿಷಯವನ್ನು ಕೊಂಡೊಯ್ಯಲಾಗುವುದು ಎಂದು ವೇಣುಗೋಪಾಲ್ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಸಿಬಿಐ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೆÇಲೀಸರು ಅವರನ್ನು ತಡೆದರು. ಇದರಿಂದಾಗಿ ಸಿಬಿಐ ಕಚೇರಿ ಮುಂದೆ ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ