ಬೆಂಗಳೂರು, ಅ.26- ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದಂತೆ ಪ್ರಮುಖ ಪಕ್ಷಗಳ ನೇತಾರರಿಂದ ಭರ್ಜರಿ ಪ್ರಚಾರ ನಡೆಸಲಾಯಿತು.
ಅದರಲ್ಲೂ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಒಂದೇ ದಿನ ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಪರ, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಕೂಡ ತಮ್ಮ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರ ಬಿರುಸಿನ ಮತಯಾಚನೆ ಮಾಡಿದರು.
ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಪ್ರಚಾರದಿಂದಾಗಿ ಮಂಡ್ಯದಲ್ಲಿಂದು ಚುನಾವಣಾ ಕಾವು ರಂಗೇರತೊಡಗಿತು. ಬೆಳಗ್ಗೆ ವಿಶೇಷ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಕುಮಾರಸ್ವಾಮಿಯವರು ಮೊದಲು ಮಳವಳ್ಳಿ, ಮದ್ದೂರಿನಲ್ಲಿ ಜೆಡಿಎಸ್ ಪರ ಮತಯಾಚನೆ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ನಾರಾಯಣಗೌಡ, ರವೀಂದ್ರ ಶ್ರೀಕಂಠಯ್ಯ, ಶ್ರೀನಿವಾಸ್, ಡಾ.ಅನ್ನದಾನಿ, ಸಚಿವ ಸಾ.ರಾ.ಮಹೇಶ್ ಸೇರಿದಂತೆ ಅನೇಕರು ಶಿವರಾಮೇಗೌಡ ಪರ ಮತಯಾಚಿಸಿ ಅಭ್ಯರ್ಥಿಯನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಮದ್ದೂರು ಬಳಿಕ ಕುಮಾರಸ್ವಾಮಿ ಅವರು ಮರಳವಳಿಯಲ್ಲೂ ಎರಡು ಕಡೆ ಬಹಿರಂಗ ಸಮಾವೇಶ ನಡೆಸಿದರು. ಉಪಚುನಾವಣೆಯಲ್ಲಿ ಪಕ್ಷದ ಅಭ್ಯಥಿರಯನ್ನು ಗೆಲ್ಲಿಸವ ಮೂಲಕ ಕೈ ಬಲಪಡಿಸುವಂತೆ ಕೋರಿದರು.
ಜೆಡಿಎಸ್ಗೆ ಸಡ್ಡು ಹೊಡೆಯುವ ರೀತಿಯಲ್ಲಿ ಪ್ರಚಾರ ನಡೆಸುತ್ತಿರುವ ಬಿಜೆಪಿ ಕೂಡ ಇಂದು ಮಂಡ್ಯದಲ್ಲಿ ಮೂರು ಕಡೆ ಬಿರುಸಿನ ಪ್ರಚಾರ ನಡೆಸಿದೆ. ಯಡಿಯೂರಪ್ಪನವರೊಂದಿಗೆ ಸಂಸದೆ ಶೋಭಾಕರಂದ್ಲಾಜೆ, ಮುಖಂಡರಾದ ಆರ್.ಅಶೋಕ್, ಸಿ.ಪಿ.ಯೋಗೇಶ್ವರ್, ಅಶ್ವಥನಾರಾಯಣ್ ಸೇರಿದಂತೆ ಅನೇಕರು ಡಾ.ಸಿದ್ದರಾಮಯ್ಯ ಪರ ಮತಯಾಚನೆ ಮಾಡಿದರು.
ಯಡಿಯೂರಪ್ಪ ಬೆಳಗ್ಗೆ ನಾಗಮಂಗಲ ನಂತರ ಮದ್ದೂರು ಹಾಗೂ ಮಳವಳ್ಳಿ ಸೇರಿದಂತೆ ಅನೇಕ ಕಡೆ ಪಕ್ಷದ ಪರ ಮತಯಾಚಿಸಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಪ್ರಚಾರದಿಂದಾಗಿ ಇಂದು ಮಂಡ್ಯದಲ್ಲಿ ಚುನಾವಣಾ ಕಾವು ರಂಗೇರಿತ್ತು.