ಬೆಂಗಳೂರು, ಅ.26- ಸರ್ಕಾರದ ವಾರ್ತಾ ಇಲಾಖೆ ಮಾದರಿಯಲ್ಲೇ ಬಿಬಿಎಂಪಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಯನ್ನು ಉನ್ನತೀಕರಿಸಲು ಪಾಲಿಕೆ ತೀರ್ಮಾನಿಸಿದೆ.
ಮಹಾನಗರ ಪಾಲಿಕೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ವಿಸ್ತಾರಗೊಂಡಿರುವ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆದಿದೆ.
ಇಂತಹ ನಗರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಿಬಿಎಂಪಿ ನಗರದ ಖ್ಯಾತಿಗೆ ತಕ್ಕಂತೆ ಮಾಹಿತಿ-ತಂತ್ರಜ್ಞಾನ ಉನ್ನತೀಕರಿಸಬೇಕಾಗಿದೆ. ಹೀಗಾಗಿ ಮುಂದಿನ ದೂರದೃಷ್ಟಿಯಿಂದ ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಯನ್ನು ಉನ್ನತೀಕರಿಸಲಾಗುತ್ತದೆ.
840ಕಿಮೀ ಸುತ್ತಳತೆ ಹೊಂದಿರುವ ನಗರದ ಅಭಿವೃದ್ಧಿಗೆ ಪಾಲಿಕೆಯಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. 2018-19ನೆ ಸಾಲಿನಲ್ಲಿ 10 ಸಾವಿರ ಕೋಟಿ ರೂ. ಮೌಲ್ಯದ ಬಜೆಟ್ ಮಂಡಿಸಲಾಗಿತ್ತು. ಬಜೆಟ್ ಘೋಷಣೆಯಂತೆ ಕಾಲಕಾಲಕ್ಕೆ ಉದ್ದೇಶಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ, ಯೋಜನೆಯ ಮಾಹಿತಿಯನ್ನು ನಗರದ ನಾಗರಿಕರಿಗೆ ನೀಡುವುದು ಪಾಲಿಕೆ ಉದ್ದೇಶ. ಹೀಗಾಗಿ ಹಾಲಿ ಇರುವ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಯನ್ನು ಸರ್ಕಾರದ ವಾರ್ತಾ ಇಲಾಖೆ ಮಾದರಿಯಲ್ಲಿ ಉನ್ನತೀಕರಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದ್ದಾರೆ.
ಕೂಡಲೇ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಯನ್ನು ಉನ್ನತೀಕರಿಸಲು ಅಗತ್ಯ ಕ್ರಮ ಕೈಗೊಂಡು ಮುಂದಿನ ಪಾಲಿಕೆ ಸಭೆಯಲ್ಲಿ ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಳ್ಳುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.