ಕೆಆರ್ ಮಾರುಕಟ್ಟೆ, ಶಿವಾಜಿನಗರ,ಕಬ್ಬನ್‍ಪಾರ್ಕ್ ಅಭಿವೃದ್ಧಿಗೆ ಬಿಬಿಎಂಪಿ ನೀಲನಕ್ಷೆ

ಬೆಂಗಳೂರು, ಅ.26- ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕೆಆರ್ ಮಾರುಕಟ್ಟೆ, ಶಿವಾಜಿನಗರ ಹಾಗೂ ಕಬ್ಬನ್‍ಪಾರ್ಕ್‍ಅನ್ನು 182 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಬಿಬಿಎಂಪಿ ನೀಲನಕ್ಷೆ ಸಿದ್ಧಪಡಿಸಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆಯಡಿ ಮೂರು ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ನವೆಂಬರ್‍ನಲ್ಲಿ ಚಾಲನೆ ದೊರೆಯುವ ಸಾಧ್ಯತೆಯಿದೆ.

ಕೆಆರ್ ಮಾರುಕಟ್ಟೆ ಅಭಿವೃದ್ಧಿಗೆ 67.97, ಶಿವಾಜಿನಗರ ಮತ್ತು ರಜಲ್ ಮಾರುಕಟ್ಟೆ ಉನ್ನತೀಕರಣಕ್ಕೆ 94.11 ಹಾಗೂ ಕಬ್ಬನ್‍ಪಾರ್ಕ್ ಸಂರಕ್ಷಣೆಗಾಗಿ 20 ಕೋಟಿ ರೂ. ಸೇರಿದಂತೆ ಒಟ್ಟಾರೆ 182.08 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

ಕೆಆರ್ ಮಾರುಕಟ್ಟೆ-ಅವಿನ್ಯೂ ರಸ್ತೆ ಹಾಗೂ ಮಾರುಕಟ್ಟೆಗೆ ಮೆಟ್ರೋ ನಿಲ್ದಾಣದಿಂದ ಸ್ಕೈ ವಾಕ್ ನಿರ್ಮಿಸುವುದು, ಬಿಎಂಟಿಸಿ ಬಸ್ ನಿಲ್ದಾಣ ಅಭಿವೃದ್ಧಿ, ಮಾರುಕಟ್ಟೆಯ ಕಟ್ಟಡ ನವೀಕರಣ, ಅಂಚೆ ಕಚೇರಿ ಮರು ನಿರ್ಮಾಣ, ಮಾಂಸ ಮಾರುಕಟ್ಟೆ ಅಭಿವೃದ್ಧಿಗೆ 67.97 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು.
ಶಿವಾಜಿನಗರ-94.11 ಕೋಟಿ ರೂ. ವೆಚ್ಚದಲ್ಲಿ ಶಿವಾಜಿನಗರ ಮತ್ತು ರಜಲ್ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣವನ್ನು ಅತ್ಯಾಧುನಿಕವಾಗಿ ಮರು ನಿರ್ಮಾಣ ಮಾಡಲು ಹಾಗೂ ನಿರುಪಯುಕ್ತ ಜಾಗದ ಸದ್ಬಳಕೆಗೆ ರೂಪುರೇಷೆ ಸಿದ್ಧಗೊಂಡಿದೆ.

ಅದೇ ರೀತಿ ವಿಶ್ವವಿಖ್ಯಾತ ಕಬ್ಬನ್‍ಪಾರ್ಕ್‍ನಲ್ಲಿ ಇಂಗುಗುಂಡಿಗಳ ನಿರ್ಮಾಣ, ಉದ್ಯಾನವನದ ಸುತ್ತಮುತ್ತ ಸಂರಕ್ಷಿತ ಬೇಲಿ ಅಳವಡಿಕೆ, ಪಕ್ಕದ ಮುಖ್ಯರಸ್ತೆಗಳಲ್ಲಿ ಸೈಕಲ್ ಪಥ ನಿರ್ಮಾಣ, ಸಮರ್ಪಕ ಪಾದಚಾರಿ ಮಾರ್ಗ ನಿರ್ಮಿಸುವುದು ಹಾಗೂ ಜ್ಞಾನಾರ್ಜನೆ ಕೇಂದ್ರ ನಿರ್ಮಾಣ ಮಾಡಲು 20 ಕೋಟಿ ರೂ.ಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲಾಗುತ್ತದೆ.

ಮೂರನೆ ಅವಧಿಯಲ್ಲಿ ಬೆಂಗಳೂರು ನಗರವು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಆದರೆ, ಇದುವರೆಗೂ ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಡುವ ಅಭಿವೃದ್ಧಿ ಕಾರ್ಯಗಳನ್ನು ಬಿಬಿಎಂಪಿ ಕೈಗೊಳ್ಳದೆ ವಿಳಂಬ ಮಾಡಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಏಕಕಾಲಕ್ಕೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಿದೆ.

ಸ್ಮಾರ್ಟ್‍ಸಿಟಿ ಯೋಜನೆಯಡಿ ಆಯ್ಕೆಮಾಡಿಕೊಂಡಿರುವ ಪ್ರದೇಶಗಳ ಅಭಿವೃದ್ಧಿಗೆ ಕೈಗೆತ್ತಿಕೊಳ್ಳುವ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಶೇಷ ಉದ್ದೇಶವಾಹಕ ರಚಿಸಲಾಗಿದೆ. ಜತೆಗೆ ಯೋಜನೆಯ ವಿಸ್ತೃತ ವರದಿ ಸಿದ್ಧಗೊಂಡಿದ್ದು, ನವೆಂಬರ್‍ನಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೇಂದ್ರದ ನೆರವು: ದೇಶದ ಪ್ರಮುಖ ನಗರಗಳನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಪ್ರತಿ ನಗರಗಳ ಅಭಿವೃದ್ಧಿಗೂ ಸಾವಿರಾರು ಕೋಟಿ ಅನುದಾನ ನೀಡುತ್ತಿದೆ.

ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಟ್ಟಿರುವ ಬೆಂಗಳೂರು ಅಭಿವೃದ್ಧಿಗೆ ವರ್ಷಕ್ಕೆ 100 ಕೋಟಿಯಂತೆ ಐದು ವರ್ಷಗಳಿಗೆ 500 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಒಟ್ಟಾರೆ 1742 ಕೋಟಿ ರೂ. ವೆಚ್ಚದಲ್ಲಿ ನಗರದ ಸಂಪೂರ್ಣ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಗೊಂಡಿದ್ದು, ಕೇಂದ್ರ ಸರ್ಕಾರದ 500 ಕೋಟಿ ನೆರವಿನೊಂದಿಗೆ ರಾಜ್ಯ ಸರ್ಕಾರ ಉಳಿದ 1242 ಕೋಟಿ ರೂ.ಗಳನ್ನು ವ್ಯಯ ಮಾಡಲು ತೀರ್ಮಾನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ