ಬೆಂಗಳೂರು, ಅ.25- ವರನಟ, ಪದ್ಮಭೂಷಣ ಡಾ.ರಾಜ್ಕುಮಾರ್ ಸಾರಥ್ಯದಲ್ಲಿ 36 ವರ್ಷಗಳ ಹಿಂದೆ ಕನ್ನಡ ಭಾಷಾ ಉಳಿವಿಗಾಗಿ ನಡೆದ ಅವಿಸ್ಮರಣೀಯ ಗೋಕಾಕ್ ಚಳವಳಿಯನ್ನು ಸ್ಮರಣೀಯವನ್ನಾಗಿಸಲು ಮಲ್ಲೇಶ್ವರ ಶಾಸಕ ಅಶ್ವಥನಾರಾಯಣ ಮುನ್ನುಡಿ ಬರೆದಿದ್ದಾರೆ.
36 ವರ್ಷಗಳ ಹಿಂದೆ ಕನ್ನಡ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಸೇರಿದಂತೆ ಕನ್ನಡಾಭಿಮಾನಗಳು ಡಾ.ರಾಜ್ಕುಮಾರ್ ನೇತೃತ್ವದಲ್ಲಿ ಚಳವಳಿ ನಡೆಸಿದರು. ಹಾಗಾಗಿಯೇ ಇಂದು ಕನ್ನಡ ಉಳಿದಿದೆ. ಅಂತಹ ಚಳವಳಿಯನ್ನು ಅವಿಸ್ಮರಣೀಯವಾಗಿಸಲು ಯಾರೂ ಮುಂದೆ ಬಂದಿರಲಿಲ್ಲ. ಅದನ್ನು ಈಗ ಸ್ಮರಣೀಯವಾಗಿಸಲು ಶಾಸಕ ಅಶ್ವಥನಾರಾಯಣ್ ಮುಂದಾಗಿದ್ದಾರೆ.
ಮಲ್ಲೇಶ್ವರಂ 18ನೇ ಅಡ್ಡರಸ್ತೆ-ಸಂಪಿಗೆ ರಸ್ತೆ ವೃತ್ತಕ್ಕೆ ಗೋಕಾಕ್ ಚಳವಳಿ ಸ್ಮರಣಾರ್ಥ ವೃತ್ತ ಎಂದು ನಾಮಕರಣ ಮಾಡುತ್ತಿದ್ದಾರೆ. ಅಲ್ಲದೆ ಅದೇ ಉದ್ಯಾನವನದಲ್ಲಿ ಡಾ.ರಾಜ್ ಅವರ ಗೋಕಾಕ್ ಚಳವಳಿ ಭಂಗಿಯ ಆರು ಅಡಿ ಎತ್ತರದ ಪುತ್ಥಳಿ ಸ್ಥಾಪಿಸಲು ತೀರ್ಮಾನಿಸಿದ್ದಾರೆ.
ನ.1ರಂದು ಮಲ್ಲೇಶ್ವರಂ ಆಟದ ಮೈದಾನದಲ್ಲಿ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವದಂದು ಗೋಕಾಕ್ ಚಳವಳಿ ಸ್ಮರಣಾರ್ಥ ವೃತ್ತ ನಾಮಕರಣ ಹಾಗೂ ಡಾ.ರಾಜ್ಕುಮಾರ್ ಅವರ ಪುತ್ಥಳಿ ಅನಾವರಣ ಸಮಾರಂಭವನ್ನು ಹಮ್ಮಿಕೊಂಡಿರುವುದಾಗಿ ಅಶ್ವಥನಾರಾಯಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ಮೊದಲ ಬಾರಿಗೆ ವೃತ್ತವೊಂದಕ್ಕೆ ಗೋಕಾಕ್ ಚಳವಳಿ ಸ್ಮರಣಾರ್ಥ ವೃತ್ತಕ್ಕೆ ಹೆಸರಿಡಲಾಗುತ್ತ್ತಿದೆ. ಈ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿಸಲು ನಾವು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಇದರಲ್ಲಿ ಹಿರಿಯ ಸಾಹಿತಿ ಪೆÇ್ರ.ಚಂದ್ರಶೇಖರಪಾಟೀಲ್, ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಎಲ್ಲರೂ ಭಾಗವಹಿಸಲಿದ್ದಾರೆ. ಕನ್ನಡ ಪರ ಸಂಘಟನೆಗಳವರೆಲ್ಲ ಸೇರಿ ಚಾಲನೆ ನೀಡಲಿದ್ದಾರೆ.
ನ.1ರಂದು ಬೆಳಗ್ಗೆ 10 ಗಂಟೆಗೆ ಮಲ್ಲೇಶ್ವರ ಆಟದ ಮೈದಾನದಿಂದ ಸಂಪಿಗೆ ರಸ್ತೆ ಮೂಲಕ ಬೃಹತ್ ಸಾಂಸ್ಕøತಿಕ ಮೆರವಣಿಗೆಯನ್ನು ಗೋಕಾಕ್ ಚಳವಳಿ ಮಾದರಿಯಲ್ಲಿ ನಡೆಸುತ್ತೇವೆ. ಇದರಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ನಟ ಪುನೀತ್ರಾಜ್ಕುಮಾರ್, ಮೇಯರ್ ಗಂಗಾಂಬಿಕೆ, ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಕನ್ನಡಪರ ಹೋರಾಟಗಾರರು, ಕಲಾವಿದರು ನಾಭೂತೋ ನಾಭವಿಷ್ಯತಿ ಎಂಬ ರೀತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಅಂದು ಖ್ಯಾತ ಹಿನ್ನೆಲೆ ಗಾಯಕ ವಿಜಯ್ಪ್ರಕಾಶ್ ಸಾರಥ್ಯದಲ್ಲಿ ಸಂಗೀತ ರಸದೌತಣ ನೀಡಲಿದ್ದಾರೆ. ಇಂದಿನ ಯುವ ಪೀಳಿಗೆಗೆ ಗೋಕಾಕ್ ಚಳವಳಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕನ್ನಡ ಭಾಷಾಭಿಮಾನ ಮತ್ತು ಗೋಕಾಕ್ ಚಳವಳಿಯ ಮಹತ್ವ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೇವೆ. ಸುಮಾರು 25ಸಾವಿರ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 7 ಲಕ್ಷ ರೂ.ನಷ್ಟು ಬಹುಮಾನ ವಿತರಿಸಲು ತೀರ್ಮಾನಿಸಿದ್ದೇವೆ ಎಂದರು.
ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು ಗೋಕಾಕ್ ಚಳವಳಿ ಸಂದರ್ಭದ ಕಹಿ, ಸಿಹಿ ನೆನಪುಗಳನ್ನು ಮೆಲುಕು ಹಾಕಿದರು.
1982ರಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಎಲ್ಲಾ ಸಾಹಿತಿಗಳು, ಖ್ಯಾತ ನಾಮರು, ಹೋರಾಟಗಾರರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ, ಅಂದಿನ ಹೋರಾಟವನ್ನು ಸರ್ಕಾರ ಹತ್ತಿಕಲು ಯತ್ನಿಸಿತ್ತು. ಈ ಹೋರಾಟಕ್ಕೆ ವರನಟ ರಾಜ್ಕುಮಾರ್ ಸಾರಥ್ಯ ಸಿಕ್ಕಿದರೆ ಬೆಲೆ ಸಿಗುತ್ತದೆ ಎಂದು ತೀರ್ಮಾನಿಸಲಾಯಿತು. ಹಾಗಾಗಿ ನಾನು ಚನ್ನೈನಲ್ಲಿದ್ದ ಅಣ್ಣಾ ಅವರ ಮನೆಗೆ ಹೋದೆ. ಆಗ ನಿರ್ದೇಶಕ ಭಗವಾನ್ ಮತ್ತು ರಾಜ್ಕುಮಾರ್ ಅವರು ವರಾಂಡದಲ್ಲಿ ಪತ್ರಿಕೆ ಓದುತ್ತಾ ಕುಳಿತಿದ್ದರು. ಕರ್ನಾಟಕದಲ್ಲಿ ನಡೆಯುತ್ತಿರುವ ಚಳವಳಿ ಬಗ್ಗೆ ಪ್ರಸ್ತಾಪಿಸಿದೆ. ಅದಕ್ಕೆ ತಕ್ಷಣ ನಮ್ಮ ಭಾಷೆಗಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ದ. ಹೋರಾಟಕ್ಕೆ ಬರುತ್ತೇನೆ. ಆದರೆ, ನಾಯಕತ್ವ ವಹಿಸುವುದಿಲ್ಲ. ಸಾಮಾನ್ಯನಾಗಿ ಬರುತ್ತೇನೆ ಎಂದು ಅಣ್ಣಾವ್ರು ಹೇಳಿದ್ದರು. ಅವರು ಹೋರಾಟಕ್ಕೆ ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರಲ್ಲೂ ಮಿಂಚಿನ ಸಂಚಲನ ಉಂಟಾಯಿತು.
ಅಂಬರೀಶ್, ಲೋಕೇಶ್, ಶಂಕರ್ನಾಗ್ ಸೇರಿದಂತೆ ಎಲ್ಲ ಕಲಾವಿದರು ಹೋರಾಟಕ್ಕೆ ದುಮುಕಿದರು. ನಾನೂ ಇದ್ದೆ. 35 ದಿನಗಳ ಕಾಲ ಸತತವಾಗಿ ಎಲ್ಲಾ ಪ್ರದೇಶಗಳಲ್ಲೂ ಚಳವಳಿ ನಡೆಸಿದೆವು. ಆಗ ಸರ್ಕಾರ ಮಣಿದು ಬೇಡಿಕೆಗಳನ್ನು ಈಡೇರಿಸಿತು. ಈ ಹೋರಾಟದಿಂದಾಗಿ ಕನ್ನಡ ಭಾಷೆ ಉಳಿಯಿತು. ಅಂತಹ ಚಳವಳಿಯನ್ನು ಸ್ಮರಣೀಯವಾಗಿಸಲು ಮುಂದಾಗಿರುವ ಶಾಸಕ ಅಶ್ವಥನಾರಾಯಣ್ ಅವರ ಶ್ರಮ ಶ್ಲಾಘನೀಯ ಎಂದು ಹೇಳಿದರು.
ಶಾಂತಣ್ಣನ ಸ್ಮರಣೆ:
ಗೋಕಾಕ್ ಚಳವಳಿ ನಿಮಿತ್ತ ಡಾ.ರಾಜ್ಕುಮಾರ್, ಶಂಕರ್ನಾಗ್ ಸೇರಿ ಹಲವಾರು ಘಟಾನುಘಟಿಗಳೊಂದಿಗೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಗೆ ಹೋಗಿದ್ದೆವು. ಅಲ್ಲಿನ ಕನ್ನಡಪರ ಹೋರಾಟಗಾರರು ಎಲ್ಲರನ್ನು ಸ್ವಾಗತಿಸಿ ಡಾ.ರಾಜ್ಕುಮಾರ್ ಇದ್ದ ಬಸನ್ನು ಸಂಭ್ರಮದಿಂದ ತಳ್ಳಿಕೊಂಡು ಬರುತ್ತಿದ್ದರು. ಹೈಟೆನ್ಷನ್ ವೈಯರ್ ಬಸ್ಗೆ ತಗುಲುವುದರಲ್ಲಿತ್ತು. ಒಂದು ವೇಳೆ ಯಾಮಾರಿದ್ದರೆ ಅಂದು ಘೋರ ದುರಂತವೇ ನಡೆದು ಹೋಗುತ್ತಿತ್ತು. ಅಷ್ಟರಲ್ಲಿ ಕುಳ್ಳ ಶಾಂತಣ್ಣ ಅವರು ಎಲ್ಲರನ್ನು ಬಸ್ನಿಂದ ಕೆಳಕ್ಕೆ ತಳ್ಳಿ ತಾವೂ ನೆಗೆದುಬಿಟ್ಟರು. ಅದರಿಂದ ಎಲ್ಲರ ಜೀವವೂ ಉಳಿಯಿತು ಎಂದು ಕುಳ್ಳ ಶಾಂತಣ್ಣ ಅವರ ತ್ಯಾಗ, ಧೈರ್ಯವನ್ನು ಸಾ.ರಾ.ಗೋವಿಂದು ಕೊಂಡಾಡಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ರಾಜ್ಯಾಧ್ಯಕ್ಷ ಮನುಬಳಿಗಾರ್, ನಟ ಗಣೇಶ್ರಾವ್, ಕನ್ನಡಪರ ಹೋರಾಟಗಾರರಾದ ಕುಳ್ಳಶಾಂತಣ್ಣ ಉಪಸ್ಥಿತರಿದ್ದರು.