ಅಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಬಾರದು: ಔಟ್‍ಡೋರ್ ಅಡ್ವಟೈಸಿಂಗ್ ಅಸೋಸಿಯೇಷನ್ ಪ್ರತಿಭಟನೆ

ಬೆಂಗಳೂರು, ಅ.25- ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ಅಳವಡಿಸಲಾಗಿರುವ ಅಧಿಕೃತವಾದ ಜಾಹೀರಾತು ಫಲಕಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ಟೌನ್‍ಹಾಲ್ ಎದುರು ಔಟ್‍ಡೋರ್ ಅಡ್ವಟೈಸಿಂಗ್ ಅಸೋಸಿಯೇಷನ್ ಬೃಹತ್ ಪ್ರತಿಭಟನೆ ನಡೆಸಿತು.

ಬೆಂಗಳೂರಿನಲ್ಲಿ ಸುಮಾರು 60 ವರ್ಷಗಳಿಂದಲೂ ಔಟ್‍ಡೋರ್ ಅಡ್ವಟೇಜಿಂಗ್ ಉದ್ಯಮ ಅಸ್ತಿತ್ವದಲ್ಲಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 5ಲಕ್ಷ ಜನ ಈ ಉದ್ಯಮವನ್ನು ಅವಲಂಬಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ನ್ಯಾಯಾಲಯದ ಆದೇಶ ಎಂದು ತಪ್ಪು ಮಾಹಿತಿ ನೀಡಿ ರಾತ್ರೋರಾತ್ರಿ ಎಲ್ಲಾ ಜಾಹೀರಾತು ಫಲಕಗಳನ್ನು ತೆರವುಗೊಳಿಸುತ್ತಿದ್ದಾರೆ. ಇದರಿಂದಾಗಿ ಅಷ್ಟೂ ಜನರ ಬದುಕು ಬೀದಿಗೆ ಬೀಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿಯಲ್ಲಿ ಅಧಿಕೃತವಾಗಿ 1800 ಜಾಹೀರಾತು ಫಲಕಗಳು ನೋಂದಣಿಯಾಗಿವೆ. ಆದರೆ, ಇತ್ತೀಚೆಗೆ ಬಿಬಿಎಂಪಿ ಸುಮಾರು 4ಸಾವಿರಕ್ಕೂ ಹೆಚ್ಚು ಜಾಹೀರಾತು ಫಲಕಗಳನ್ನು ತೆರವುಗೊಳಿಸಿದೆ. ಅಧಿಕೃತವಾಗಿ ಇರುವುದೇ 1800. ಆದರೆ, ಇನ್ನು 4ಸಾವಿರ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸುವವರೆಗೂ ಬಿಬಿಎಂಪಿ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ.ಜಾವೇದ್ ಪ್ರಶ್ನಿಸಿದ್ದಾರೆ.

ಅನಧಿಕೃತವಾದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ನಾವು ಅಡ್ಡಿಪಡಿಸುವುದಿಲ್ಲ. ಆದರೆ, ಅಧಿಕೃತ ಫಲಕಗಳನ್ನು ತೆರವುಗೊಳಿಸುತ್ತಿರುವುದರ ಹಿಂದೆ ವ್ಯವಸ್ಥಿತ ಹುನ್ನಾರ ಇದೆ. ನ್ಯಾಯಾಲಯ ಬಂಟಿಂಗ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸಬೇಕು ಎಂದು ಆದೇಶ ನೀಡಿರುವುದಾಗಿ ತಪ್ಪು ಮಾಹಿತಿ ನೀಡಿದೆ. ಅಂತಹ ಯಾವುದೇ ಆದೇಶಗಳು ಬಂದಿಲ್ಲ. ಅಧಿಕಾರಿಗಳು ತಮಗೆ ಬೇಕಾದವರಿಗೆ ಮುಂದಿನ ದಿನಗಳಲ್ಲಿ ಹಂಚಿಕೆ ಮಾಡಲು ಈಗ ಬಂಟಿಂಗ್ಸ್, ಬೋರ್ಡ್‍ಗಳನ್ನು ತೆರವು ಮಾಡಿಸುತ್ತಿದ್ದಾರೆ. ವರ್ಷಕ್ಕೆ ಸುಮಾರು 500ಕೋಟಿ ರೂ. ವಹಿವಾಟು ನಡೆಯುವ ಈ ಉದ್ಯಮದಿಂದ ಸರ್ಕಾರಕ್ಕೆ ಸುಮಾರು 100 ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಹೇಳಿದರು.

ಬಿಬಿಎಂಪಿ ಅಧಿಕಾರಿಗಳ ದುರುದ್ದೇಶಪೂರಿತ ಕ್ರಮದಿಂದ ಸಾವಿರಾರು ಮಂದಿ ತೊಂದರೆಗೊಳಗಾಗಿದ್ದಾರೆ. ಕೂಡಲೇ ಅಧಿಕೃತವಾದ ಬಂಟಿಂಗ್ಸ್, ಜಾಹೀರಾತು ಫಲಕಗಳಿಗೆ ಅವಕಾಶ ಮುಂದುವರೆಸಬೇಕು. ಇಲ್ಲವಾದರೆ ಇಂದು ಸಾಂಕೇತಿಕವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಸಂಘದ ಉಪಾಧ್ಯಕ್ಷ ಆರ್.ಕೆ.ಬಾಟೀಯ, ಮುಖಂಡರಾದ ಎ.ಸಿ.ಚಿಕ್ಕಣ್ಣ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ