ಬೆಂಗಳೂರು, ಅ.25- ನಗರದಲ್ಲಿ ರಸ್ತೆಗುಂಡಿ ಮುಚ್ಚದಿರುವುದು ಕಸ ವಿಲೇವಾರಿಯಲ್ಲಿನ ವೈಫಲ್ಯತೆ. ವೈಟ್ ಟಾಪಿಂಗ್ ಸಮಸ್ಯೆ ಸೇರಿದಂತೆ ಇನ್ನೂ ಹಲವು ವಿಚಾರಗಳ ಬಗ್ಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತೀವ್ರ ತರಾಟೆಗೆ ತೆಗೆದುಕೊಂಡರು.
ವಿಕಾಸಸೌಧದಲ್ಲಿ ಇಂದು ನಡೆದ ಬಿಬಿಎಂಪಿ ಸಭೆಯಲ್ಲಿ ಪ್ರತಿಯೊಂದು ವಿಚಾರಕ್ಕೂ ನ್ಯಾಯಾಲಯ ಸೂಚನೆ ನೀಡಬೇಕೆ ಎಂದು ಗರಂ ಆದ ಡಿಸಿಎಂ ಸರ್ಕಾರ ಇರುವುದು ಏಕೆ? ಸಮಸ್ಯೆ ಬಗೆಹರಿಸಲು ಆಗುವುದಿಲ್ಲವೆ? ನಿಮಗೆಲ್ಲ ಜವಾಬ್ದಾರಿ ಇಲ್ಲವೆ? ನಿಮ್ಮ ನಿಮ್ಮ ಜವಾಬ್ದಾರಿ ನಿರ್ವಹಿಸಲು ಇರುವ ಸಮಸ್ಯೆ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರಾದರೂ ನಿಮ್ಮ ಕೆಲಸದಲ್ಲಿ ಅಡ್ಡಿಯಾಗಿದ್ದರೆಯೇ ಹೇಳಿ. ಸರಿಯಾಗಿ ಕೆಲಸ ಮಾಡಿ. ನಗರದಾದ್ಯಂತ ಸಾಕಷ್ಟು ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಅದನ್ನು ಮುಚ್ಚುವುದಾಗಿ ಹೇಳಿದ್ದೀರಿ. ಆದರೆ, ಸಮಸ್ಯೆಗಳು ಹಾಗೆಯೇ ಇವೆ. ನೀವು ನೀಡಿರುವ ಸಮರ್ಥನೆ ತೃಪ್ತಿಯಾಗಿಲ್ಲ ಎಂದು ಚಾಟಿ ಬೀಸಿದರು.
ನಿಮ್ಮ ಬೇಜವಾಬ್ದಾರಿಯಿಂದ ಸರ್ಕಾರ ಮುಜುಗರಕ್ಕೊಳಗಾಗುತ್ತಿದೆ. ಎಲ್ಲೆಡೆ ರಸ್ತೆ ಗುಂಡಿಗಳು ಬಿದ್ದು ಅಪಘಾತ ಸಂಭವಿಸುತ್ತಿವೆ. ವೈಟ್ ಟಾಪಿಂಗ್ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಕಸದ ಸಮಸ್ಯೆ ಬಗೆಹರಿದಿಲ್ಲ ಎಂದು ಬಿಬಿಎಂಪಿ ಸಿಬ್ಬಂದಿ ಕಾರ್ಯನಿರ್ವಹಣೆ ಬಗ್ಗೆ ಕಿಡಿಕಾರಿದರು.
ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ರಸ್ತೆ ಅಗಲೀಕರಣದಂತಹ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಮೆಟ್ರೋ ಸೇರಿದಂತೆ ರಸ್ತೆ ಅಗಲೀಕರಣ, ಇನ್ನಿತರ ಕೆಲಸಗಳಿಗಾಗಿ ತೆರವುಗೊಳಿಸಲಾದ ಮರಗಳ ಬದಲಿಗೆ ಎಷ್ಟು ಗಿಡಗಳನ್ನು ನೆಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ಪಾರ್ಕ್ಗಳ ನಿರ್ವಹಣೆಯಲ್ಲೂ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಈ ಬಗ್ಗೆ ತಮಗೆ ಸಮಗ್ರ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಇಂತಹ ಬೇಜವಾಬ್ದಾರಿತನ ಮುಂದೆ ಮರುಕಳಿಸದಂತೆ ಎಚ್ಚರಿಸಿದ ಅವರು, ಗಿಡ ನೆಟ್ಟಿರುವ ಬಗ್ಗೆ ಮಾಹಿತಿ ಒದಗಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮೇಯರ್ ಗಂಗಾಂಬಿಕೆ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸದಸ್ಯರಾದ ಜೆಡಿಎಸ್ನ ನೇತ್ರಾ ನಾರಾಯಣ್, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಸೇರಿದಂತೆ ಎಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಭಾಗವಹಿಸಿದ್ದರು.