ಕುಮಾರಸ್ವಾಮಿ-ಸಿದ್ದರಾಮಯ್ಯರಿಂದ ಸಮಯ ಸಾಧಕತನದ ರಾಜಕಾರಣ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ

ಬೆಂಗಳೂರು, ಅ.25-ವಿಧಾನಸಭೆ ಚುನಾವಣೆಗೂ ಮುನ್ನ ಪರಸ್ಪರ ಹಾವು-ಮುಂಗುಸಿಯಂತಿದ್ದ ಕುಮಾರಸ್ವಾಮಿ-ಸಿದ್ದರಾಮಯ್ಯ ಈಗ ಒಂದಾಗುವ ಮೂಲಕ ಸಮಯ ಸಾಧಕತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದರು.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಶೇಖರ್ ಪರ ಪ್ರಚಾರ ಹಾಗೂ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಮಯ ಸಾಧಕತನ ರಾಜಕಾರಣಕ್ಕೆ ಕುಮಾರಸ್ವಾಮಿ-ಸಿದ್ದರಾಮಯ್ಯ ಹೇಳಿ ಮಾಡಿಸಿದ ಜೋಡಿ ಎಂದು ವ್ಯಂಗ್ಯವಾಡಿದರು.
ಅಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ, ಈಗ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಧಿಕಾರ ಹಿಡಿದಿದ್ದಾರೆ. ಇವರಿಗೆ ಎಷ್ಟು ನಾಲಿಗೆ ಇದೆ ಎಂದು ಪ್ರಶ್ನಿಸಿದರು.

ನಿಮ್ಮ ಅವಕಾಶವಾದಿ ರಾಜಕಾರಣಕ್ಕೆ ಬಿಜೆಪಿಯನ್ನು ಅಧಿಕಾರದಿಂದ ದೂರ ವಿಡಲು ಒಂದಾಗಿದ್ದೇವೆ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾರೊಬ್ಬರೂ ನಂಬುತ್ತಿಲ್ಲ. ಈಗಾಗಲೇ ಬಿಎಸ್‍ಪಿ ಮುಖ್ಯಸ್ಥೆ ಮಾಯವತಿ ಅವರು ಮಹಾ ಘಟ್ ಬಂಧನ್ ನಿಂದ ದೂರ ಉಳಿದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಮುಳುಗಿಸುವುದು ಖಚಿತ ಎಂದು ಸದಾನಂದಗೌಡ ಭವಿಷ್ಯ ನುಡಿದರು.

ನಾವು ಈ ಬಾರಿ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಚಾರ ನಡೆಸುತ್ತಿದ್ದೇವೆ. ಫಲಿತಾಂಶ ಬಂದ ನಂತರ ಸಮ್ಮಿಶ್ರ ಸರ್ಕಾರಕ್ಕೆ ಮಿಕ್ಸರ್ ಹೊಡೆಯುವುದು ಗ್ಯಾರಂಟಿ. ಯಾವುದೇ ಕಾರಣಕ್ಕೂ ಈ ಸರ್ಕಾರ ಲೋಕಸಭೆ ಚುನಾವಣೆವರೆಗೂ ಇರುವುದಿಲ್ಲ ಎಂದು ಹೇಳಿದರು.

ರಾಮನಗರವನ್ನು ಮಾಜಿ ಪ್ರಧಾನಿ ದೇವೇಗೌಡರು ಪ್ರತಿನಿಧಿಸುತ್ತಿದ್ದರು. ಕ್ಷೇತ್ರದಲ್ಲಿ ಯಾರಾದರೂ ಸತ್ತರೂ ಒಂದು ಸ್ಮಶಾನವಿಲ್ಲ, ಕುಡಿಯುವ ನೀರಿಗೆ ಹಾಹಾಕಾರವಿದೆ. ರಸ್ತೆಗಳನ್ನು ದೇವರೇ ಕಾಪಾಡಬೇಕು. ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸಿಕೊಡದ ಕುಮಾರಸ್ವಾಮಿ ರಾಜ್ಯವನ್ನು ಉದ್ದಾರ ಮಾಡುತ್ತಾರೆಯೇ ಎಂದರು.

ಮಾತೆತ್ತಿದರೆ ನಾವು ಮಣ್ಣಿನ ಮಕ್ಕಳು, ರೈತರ ಮಕ್ಕಳು ಎಂದು ದೇವೇಗೌಡರು ಹೇಳುತ್ತಾರೆ. ಇವರು ರೈತರಿಗಾಗಿ ಒಂದೇ ಒಂದು ಕಾರ್ಯಕ್ರಮವನ್ನೂ ರೂಪಿಸಲಿಲ್ಲ. ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸಿದ್ದೆ ಮಹಾನ್ ಸಾಧನೆ ಎಂದು ಕುಹಕವಾಡಿದರು.

ಚನ್ನಪಟ್ಟಣದಲ್ಲಿ ಶಾಸಕರಾಗಿದ್ದ ವೇಳೆ ಸಿ.ಪಿ.ಯೋಗೇಶ್ವರ್ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು. ಈಕ್ಷೇತದಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಿದರು. ಆದರೆ ಅಪಪ್ರಚಾರದಿಂದ ಸೋಲಲೇಬೇಕಾಯಿತು. ಇದರಿಂದ ಯೋಗೇಶ್ವರ್ ಧೃತಿಗೆಟ್ಟಿಲ್ಲ. ಮುಂದಿನ ಚುನಾವಣೆಗೆ ಚನ್ನಪಟ್ಟಣದ ಕೈ ಹಿಡಿಯಲಿದ್ದಾರೆ ಎಂದು ಸದಾನಂದಗೌಡ ವ್ಯಕ್ತಪಡಿಸಿದರು.

ಈ ವೇಳೆ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್, ಮುಖಂಡ ತುಳಸಿ ಮುನಿರಾಜುಗೌಡ, ಬಿಜೆಪಿ ಅಭ್ಯರ್ಥಿ ಎಂ.ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ