ಬೆಂಗಳೂರು, ಅ.25-ಸಣ್ಣ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ 23 ನಿರ್ಣಾಯಕ ಅಂಶಗಳ ಪರಿಹಾರೋಪಾಯಗಳನ್ನು ಕೋರಿ ಸಚಿವರಿಗೆ ನಿವೇದನಾ ಪತ್ರ ಸಲ್ಲಿಸಿರುವುದಾಗಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಗೌರವ ಅಧ್ಯಕ್ಷ ಬಸವರಾಜ್ ಎಸ್.ಜವಳಿ ತಿಳಿಸಿದರು.
ಸಣ್ಣ ಕೈಗಾರಿಕೆಗಳ ಸಚಿವ ಎಸ್. ಆರ್.ಶ್ರೀನಿವಾಸ್ ರವರೊಂದಿಗೆ ರಾಜ್ಯದ ಎಸ್.ಎಂ.ಇ. ವಲಯದ ಉದ್ದಿಮೆಗಳು ಎದುರಿಸುತ್ತಿರುವ ಕುಂದು ಕೊರತೆಗಳ ಕುರಿತು ಸಂವಾದ ಸಭೆಯಲ್ಲಿ ಮನವಿ ಸಲ್ಲಿಸಿದ್ದು, ಕರ ಸಮಾಧಾನ ಯೋಜನೆಯ ವಿಸ್ತರಣೆ, ಕೈಗಾರಿಕಾ ವಸಾಹತುಗಳಲ್ಲಿನ ಮೂಲಭೂತ ಸೌಕರ್ಯಗಳ ಉನ್ನತೀಕರಣದ ಬಗ್ಗೆ, ವಿದ್ಯುತ್ ಸರಬರಾಜು ಸಂಬಂಧ, ಕನಿಷ್ಠ ವೇತನ, ಪಂಚಾಯತಿಗಳಿಂದ ಆಸ್ತಿ ತೆರಿಗೆಯ ಕೆಳಮುಖ ಪರಿಷ್ಕರಣೆ, ಉತ್ಪಾದನಾ ಕ್ಷೇತ್ರದಲ್ಲಿರುವ ಮಹಿಳಾ ಉದ್ಯಮಿದಾರರ ಬಗ್ಗೆ ವಿಶೇಷ ಗಮನ ಸೇರಿದಂತೆ 23 ಅಂಶಗಳ ಬಗ್ಗೆ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಅವುಗಳನ್ನು ಕೃತಜ್ಞರಾಗಿ ಸ್ವೀಕರಿಸಿದ್ದೇವೆ ಎಂದು ತಿಳಿಸಿದ ಅವರು, ಆದರೆ ಈ ವಲಯದಲ್ಲಿರುವ ಸಮಸ್ಯೆಗಳ ನಿವಾರಣೆಗೂ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಕಾಸಿಯಾ ಕೌಶ್ಯಾಭಿವೃದ್ಧಿ ಕೇಂದ್ರಕ್ಕೆ ಸೂಕ್ತ ಅನುದಾನ, ಭೂ ಪರಿವರ್ತನೆ ಸರಳೀಕರಣ, ಬೆಳಗಾವಿಯಲ್ಲಿ ಫೌಂಡ್ರಿ ಕ್ಲಸ್ಟರ್ ಸ್ಥಾಪನೆ, ಮಹಾನಗರಪಾಲಿಕೆಗಳಿಂದ ಅಸ್ತಿ ತೆರಿಗೆ ವಸೂಲಾತಿ, ಬೆಳಗಾವಿ, ನಾವಗೆ ಕೈಗಾರಿಕಾ ಪ್ರದೇಶದಲ್ಲಿ 110 ಕೆ.ವಿ. ಸಬ್ ಸ್ಟೇಷನ್,ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ ಯಂತಹ ಪ್ರಮುಖ ವಿಷಯಗಳನ್ನು ಪತ್ರದ ಮೂಲಕ ತಿಳಿಸಲಾಗಿದ್ದು, ಶೀಘ್ರವಾಗಿ ಈ ಸಮಸ್ಯೆ ನಿವಾರಿಸುವಂತೆ ಕೋರಲಾಗಿದೆ.
ಮನವಿ ಸ್ವೀಕರಿಸಿ ಕುಂದುಕೊರತೆಗಳನ್ನು ಆಲಿಸಿದ ಸಚಿವರು ನಿವೇದನೆಯಲ್ಲಿನ ಎಲ್ಲಾ ಅಂಶಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರಸೆ ನೀಡಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹೆಚ್ಚಿನ ಪೆÇ್ರೀ ನೀಡುವ ನಿಟ್ಟಿನಲ್ಲಿ ಎಂಎಸ್ಎಂಇ ನಿರ್ದೇಶನಾಲಯದಿಂದ ಕ್ರಯಪತ್ರ ವಿತರಣೆಗೆ ವಿಶೇಷಅಭಿಯಾನ ನಡೆಸುವುದಲ್ಲದೇ ಕೆಐಎಡಿಬಿ ಮತ್ತು ಕೆ.ಎಸ್.ಎಸ್.ಐ.ಡಿಸಿ. ವತಿಯಿಂದ ಹಂಚಿಕೆಯಾಗುವ ಮಳಿಗೆ/ನಿವೇಶನಗಳನ್ನು ಕೈಗೆಟುಕುವ ದರದಲ್ಲಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ ಎಂದು ವಿವರಿಸಿದರು.
ಸರ್ಕಾರದ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ, ಎಂಎಸ್ಎಂಇ ನಿರ್ದೇಶನಾಲಯ ಆಯುಕ್ತರಾದ ಗುಂಜನ್ ಕೃಜ್ಣ, ಕೆಎಸ್ಎಸ್ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಎಂಎಸ್ಎಂಇ ನಿರ್ದೇಶನಾಲಯ ಅಪರ ನಿರ್ದೇಶಕ ಹೆಚ್.ಎಂ.ಶ್ರೀನಿವಾಸ್, ಕಾಸಿಯಾದ ಗೌರವ ಜಂಟಿ ಕಾರ್ಯದರ್ಶಿ (ಗ್ರಾಮಾಂತರ) ಎಸ್.ವಿಶ್ವೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.