ಅ.27ರಂದು ಶ್ರೀ ಶಬರಿಮಲೆ ಸಂರಕ್ಷಣಾ ವೇದಿಕೆಯಿಂದ ಶಾಂತಿ ಸದ್ಭಾವನಾ ಮೆರವಣಿಗೆ

ಬೆಂಗಳೂರು, ಅ.25- ಸರ್ವೋಚ್ಛ ನ್ಯಾಯಾಲಯವು ತನ್ನ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಇದೇ 27ರಂದು ಬೆಳಗ್ಗೆ 11 ಗಂಟೆಗೆ ನಗರದ ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೂ ಶಾಂತಿ ಸದ್ಭಾವನಾ ಮೆರವಣಿಗೆ ನಡೆಸುವುದಾಗಿ ಶ್ರೀ ಶಬರಿಮಲೆ ಸಂರಕ್ಷಣಾ ವೇದಿಕೆ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಹರಿಹರಾತ್ಮಜ ಪೀಠಾಧಿಪತಿಗಳಾದ ವಿದ್ಯಾ ವಾಚಸ್ಪತಿ ಪರಮಪೂಜ್ಯ ಶ್ರೀ ಡಾ.ವಿಶ್ವಸಂತೋಷ ಭಾರತಿ ಶ್ರೀಪಾದಾರ ಸ್ವಾಮೀಜಿ ಮಾತನಾಡಿ, ಕೇವಲ ಬೆರಳೆಣಿಕೆ ನಾಸ್ತಿಕ ಜನರ ವಿಕೃತ ಮನಸ್ಸಿನ ಹಾಗೂ ಕಾನುನು ಚೌಕಟ್ಟಿನ ಒತ್ತಡಕ್ಕೆ ನೂರಾರು ಕೋಟಿ ಆಸ್ತಿಕ ಭಕ್ತರ ಧಾರ್ಮಿಕ ನಂಬಿಕೆ ಆಚರಣೆಯ ದಮನಕ್ಕೆ ಸರ್ಕಾರಗಳು ಮುಂದಾಗುತ್ತಿರುವುದು ದುರಂತವಾಗಿದೆ. ಇದರಿಂದ ಸಂಪ್ರದಾಯಗಳಿಗೆ ಧಕ್ಕೆಯಾಗುತ್ತದೆ ಎಂದರು.

ಈಗಾಗಲೇ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ 1ರಿಂದ 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರವೇಶವಿದೆ. ಆದರೆ, ಸರ್ವೋಚ್ಛ ನ್ಯಾಯಾಲಯವು ಈಗ ನೀಡಿರುವ ಆದೇಶ ಸರಿಯಲ್ಲ ಎಂದು ಹೇಳಿದರು.
ಅಯ್ಯಪ್ಪಸ್ವಾಮಿ ದೇವಾಲಯ ದೇಶದ ಹೆಗ್ಗಳಿಕೆಯ ಕ್ಷೇತ್ರವಾಗಿದೆ. ಹಾಗಾಗಿ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ಈ ಶಾಂತಿಯುತ ಪ್ರತಿಭಟನೆಗೆ ನಮ್ಮ ಬೆಂಬಲವಿದೆ. ನಮ್ಮ ಆಧ್ಯಾತ್ಮಿಕ ಪುಣ್ಯ ದೇವಾಲಯ ಮತ್ತು ಮೋಕ್ಷ ಭೂಮಿಯಾಗಿದ್ದು, ಇದನ್ನು ಕೆಡಿಸಲು ನಿರಂತರವಾಗಿ ಹುನ್ನಾರ ನಡೆಸಲಾಗುತ್ತಿದೆ. ಇತ್ತೀಚೆಗೆ ಹಿಂದೂ ಧರ್ಮ, ಗ್ರಂಥ, ಮಠಗಳನ್ನು ಅವಹೇಳನ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಸುಪ್ರೀಂಕೋರ್ಟ್ ಸೇರಿದಂತೆ ಯಾವುದೇ ನ್ಯಾಯಾಲಯ ಸಂಪ್ರದಾಯಗಳಿಗೆ ಧಕ್ಕೆ ತರುವಂತಹ ತೀರ್ಪು ನೀಡಬಾರದು. ಬೇರೆ ಧರ್ಮದವರು ಏನೇ ಕುತಂತ್ರ ಮಾಡಿದರೂ ನಮ್ಮ ದೇಶದ ಪರಂಪರೆ ಹಾಳು ಮಾಡುವುದಕ್ಕೆ ಸಾಧ್ಯವಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಶಿವರಾಮು ಗುರುಸ್ವಾಮಿ, ಸಂಚಾಲಕ ಟಿ.ಬಿ.ಶೇಖರ್, ಕೃಷ್ಣಪ್ಪ, ಜಯರಾಮ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ