ಬಿಬಿಎಂಪಿಗೆ 5 ಕೋಟಿ ರೂ. ದಂಡ ವಿಧಿಸಿದ ಎನ್ ಜಿಟಿ

ಬೆಂಗಳೂರು, ಅ.25- ತನ್ನ ಕಾರ್ಯ ಮಾಡುವಲ್ಲಿ ವಿಫಲವಾಗಿ ಈಗಾಗಲೇ ಹಲವಾರು ಬಾರಿ ಹೈಕೋರ್ಟ್‍ನಿಂದ ಛೀಮಾರಿ ಹಾಕಿಸಿಕೊಂಡಿರುವ ಬಿಬಿಎಂಪಿಗೆ ಇದೀಗ ಹಸಿರು ನ್ಯಾಯಮಂಡಳಿ ಕೂಡ ಚಳಿ ಬಿಡಿಸಿದೆ.

ಕ್ವಾರಿಗಳಲ್ಲಿ ಸುರಿದ ತ್ಯಾಜ್ಯದ ಸುರಕ್ಷಿತ ವಿಲೇವಾರಿಗೆ ಬಯೋಮೈನಿಂಗ್ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದ ಹಸಿರು ನ್ಯಾಯಮಂಡಳಿಯ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ಬಿಬಿಎಂಪಿಗೆ ನ್ಯಾಯಾಲಯ 5 ಕೋಟಿ ರೂ. ದಂಡ ವಿಧಿಸಿದೆ.
ಒಂದು ತಿಂಗಳೊಳಗಾಗಿ ದಂಡದ ಮೊತ್ತವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು. ಆ ಹಣವನ್ನು ಮಂಡಳಿ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಹಸಿರು ನ್ಯಾಯಮಂಡಳಿ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ ಪೀಠ ತೀರ್ಪು ನೀಡಿದೆ.
ನಗರದಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ 4500 ಟನ್‍ಗೂ ಹೆಚ್ಚು ಕಸವನ್ನು ಬಿಬಿಎಂಪಿ ಬೆಂಗಳೂರು ಉತ್ತಮ ತಾಲೂಕಿನಲ್ಲಿರುವ ಕ್ವಾರಿಗಳಲ್ಲಿ ಸುರಿಯುತ್ತಿತ್ತು.

ಈ ಕುರಿತಂತೆ ವಾದ-ವಿವಾದ ಆಲಿಸಿದ ಹಸಿರು ನ್ಯಾಯಮಂಡಳಿ ಬಿಬಿಎಂಪಿ ಅಧಿಕಾರಿಗಳಿಗೆ ಕ್ವಾರಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸುರಕ್ಷಿತ ವಿಲೇವಾರಿ ಮಾಡಲು ಬಯೋಮೈನಿಂಗ್ ಅಳವಡಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಆದರೆ, ಕ್ವಾರಿಗಳಲ್ಲಿ ಸಂಗ್ರಹವಾಗುವ ಕಸವನ್ನು ಹಾಗೆಯೇ ಬಿಟ್ಟ ಬಿಬಿಎಂಪಿ ಅದರ ಮೇಲೆ ಮಣ್ಣಿನ ಹೊದಿಕೆ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ಅವರು ಬಿಬಿಎಂಪಿ ವರ್ತನೆಗೆ ಛೀಮಾರಿ ಹಾಕಿ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ರಕ್ಷಣೆಯ ಶಾಸನಬದ್ಧ ಹೊಣೆಗಾರಿಕೆ ಹೊಂದಿರಬೇಕಾದ ಬಿಬಿಎಂಪಿಯ ಹೊಣೆಗೇಡಿತನದ ಈ ನಿರ್ಧಾರ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕೂಡಲೇ ಮಾಡಿದ ತಪ್ಪಿಗೆ 5 ಕೋಟಿ ರೂ. ದಂಡ ಪಾವತಿಸಬೇಕು. ಆ ಹಣದಿಂದ ಕ್ವಾರಿ ಸುತ್ತಮುತ್ತಲ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳುವಂತೆ ತೀರ್ಪು ನೀಡಿದ್ದಾರೆ.

ಕೇಂದ್ರ ಪರಿಸರ ಮತ್ತು ಹವಮಾನ ಬದಲಾವಣೆ ಸಚಿವಾಲಯ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿಧಿಗಳು ನಡೆಸಿದ ಜಂಟಿ ತಪಾಸಣೆ ವರದಿಯನ್ನು ನ್ಯಾಯಾಲಯ ಪರಿಶೀಲಿಸಿದೆ.
ತ್ಯಾಜ್ಯ ವಿಲೇವಾರಿ ಸ್ಥಳಗಳ ಸುತ್ತಮುತ್ತ ಪರಿಸರ ಕಾಪಾಡಿಕೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಕಳೆದ ಮಾರ್ಚ್ 9ರಂದು ಹಸಿರು ನ್ಯಾಯಮಂಡಳಿ 10 ಲಕ್ಷ ರೂ.ಗಳ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ