30 ಸಾವಿರ ಆಟೋಗಳಿಗೆ ಪರವಾನಗಿ ನೀಡಲು 6ತಿಂಗಳ ಹಿಂದೆಯೇ ಅನುಮತಿ

ಬೆಂಗಳೂರು, ಅ.25-ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ 30 ಸಾವಿರ ಆಟೋಗಳಿಗೆ ಪರವಾನಗಿ ನೀಡಲು ರಾಜ್ಯ ಸರ್ಕಾರ ಆರು ತಿಂಗಳ ಹಿಂದೆಯೇ ಅನುಮತಿ ನೀಡಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಟೋಗಳಿಗೆ ಹೆಚ್ಚುವರಿ ಪರವಾನಗಿ ನೀಡುತ್ತಿರುವ ಬಗ್ಗೆ ಆಟೋ ಚಾಲಕರ ಸಂಘ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದರು.

ಪ್ರತಿ ವರ್ಷ 5 ಸಾವಿರದಂತೆ ಒಟ್ಟು 30 ಸಾವಿರ ಆಟೋಗಳಿಗೆ ವಿಧಾನಸಭೆ ಚುಣಾವಣೆಗೂ ಮೊದಲೇ ಅನುಮತಿ ನೀಡಲಾಗಿದೆ. ಈಗಾಗಲೇ 1,28,000 ಆಟೋಗಳು ಬೆಂಗಳೂರಿನಲ್ಲಿವೆ. ಜೊತೆಗೆ 30 ಸಾವಿರ ಆಟೋಗಳು ಸೇರ್ಪಡೆಗೊಳ್ಳುತ್ತವೆ. ಈ ಆಟೋಗಳಿಗೆ ಅನುಮತಿ ನೀಡುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿ. ಇದರಲ್ಲಿ ಸಾರಿಗೆ ಇಲಾಖೆಯ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಎಂದರು.
2 ಸ್ಟ್ರೋಕ್ ಆಟೋಗಳನ್ನು ರದ್ದು ಮಾಡಿ 4 ಸ್ಟ್ರೋಕ್ ಆಟೋಗಳನ್ನಾಗಿ ಬದಲಾವಣೆ ಮಾಡಲು ರಾಜ್ಯಸರ್ಕಾರ ತೀರ್ಮಾನ ಮಾಡಿದೆ. ಈ ವಿಷಯವಾಗಿ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಆಟೋ ಚಾಲಕರ ಸಂಘ ನಮಗೆ ಸರ್ಕಾರದಿಂದ 50 ಸಾವಿರ ರೂ.

ಸಬ್ಸಿಡಿ ನೀಡುವಂತೆ ಬೇಡಿಕೆ ಮುಂದಿಟ್ಟಿದೆ. ಅದು ಸರ್ಕಾರದ ಪರಿಶೀಲನೆಯಲ್ಲಿದೆ. 2020-21ರ ಅಂತ್ಯದವರೆಗೂ 2 ಸ್ಟ್ರೋಕ್ ಆಟೋಗಳಿಗೆ ಅನುಮತಿ ಮುಂದುವರೆಸಬೇಕು ಎಂಬ ಬೇಡಿಕೆ ಇದೆ. ಎಲ್ಲಾ ವಿಷಯಗಳು ಸರ್ಕಾರ ಪರಿಶೀಲನೆಯಲ್ಲಿವೆ. ವಾಯು ಮಾಲಿನ್ಯ ನಿಯಂತ್ರಣವನ್ನು ತಡೆಗಟ್ಟುವ ಸಲುವಾಗಿ ಅಜೀಂ ಪ್ರೇಮ್‍ಜೀ ನೇತೃತ್ವದ ಸಮಿತಿ ಮಾಡಿರುವ ಶಿಫಾರಸು ಆಧರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.

 

ಸಮ-ಬೆಸ ಸಂಖ್ಯೆಗಳ ವಾಹನಗಳನ್ನು ಸರದಿಯ ಮೇಲೆ ರಸ್ತೆಗಿಳಿಸಿ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಸುಮಾರು 20 ವರ್ಷಕ್ಕಿಂತಲೂ ಹಳೇ ವಾಹನಗಳನ್ನು ನಿಷೇಧಿಸುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಾರಿಗೆ ಇಲಾಖೆಯಲ್ಲಿ ಶೇ.40ರಷ್ಟು ಅಧಿಕಾರಿಗಳ ಕೊರತೆ ಇದೆ. ಹಾಗಾಗಿ ಆರ್‍ಟಿಒಗಳು ಬ್ರೇಕ್ ಇನ್ಸ್‍ಪೆಕ್ಟರ್‍ಗಳನ್ನು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಹೆಚ್ಚುವರಿ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೇಮಕಾತಿ ಪೂರ್ಣಗೊಂಡ ನಂತರ ನಿಯೋಜನೆ ಸಮಸ್ಯೆ ನಿವಾರಣೆಯಾಗುತ್ತದೆ. ಹಣ ಕೊಟ್ಟು ಕೆಲವು ಅಧಿಕಾರಿಗಳು ಹೆಚ್ಚುವರಿ ಹುದ್ದೆಗಳನ್ನು ಪಡೆದುಕೊಳ್ಳುತ್ತ್ಟಾರೆ ಎಂಬ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಸಾರಿಗೆ ಇಲಾಖೆಗೆ 644 ಮಂದಿ ಆರ್‍ಟಿಒಗಳ ಅಗತ್ಯವಿದೆ. ಆದರೆ 134 ಮಂದಿ ಮಾತ್ರ ಇದ್ದಾರೆ ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ