ಅಮೃತಸರ: ಅಮೃತಸರ ರೈಲು ದುರಂತದಲ್ಲಿ ಸಾವನ್ನಪ್ಪಿದ ಪೋಷಕರ ಮಕ್ಕಳನ್ನು ದತ್ತು ತೆಗೆದುಕೊಳ್ಲುವುದಾಗಿ ಪಂಜಾಬ್ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ದಂಪತಿ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಧು, ರೈಲು ದುರಂತದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳನ್ನು ನಾನು ಮತ್ತು ನನ್ನ ಪತ್ನಿ ದತ್ತು ಪಡೆದುಕೊಳ್ಳುತ್ತೇವೆ. ನಾವು ಜೀವಂತವಾಗಿರುವವರೆಗೆ ಅವರ ಜವಾಬ್ದಾರಿ ನಮ್ಮದು ಎಂದರು.
ದತ್ತು ತೆಗೆದುಕೊಂಡ ಮಕ್ಕಳಿಗೆ ಉತ್ತಮ ಸಂಸ್ಥೆಯಲ್ಲಿ ಶಿಕ್ಷಣ ಒದಗಿಸುವುದರಿಂದ ಹಿಡಿದು ಎಲ್ಲ ವೆಚ್ಚವನ್ನು ನಾವೇ ನೋಡಿಕೊಳ್ಳುತ್ತೇವೆ . ಜತೆಗೆ ದುರಂತದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರಿಗೂ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ರೈಲು ಚಾಲಕನಿಗೆ ಕ್ಲೀನ್ಚಿಟ್ ನೀಡಿದ ವಿಷಯ ಕುರಿತು ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡು,”ದುರಂತದ ಬಗ್ಗೆ ತನಿಖೆ ನಡೆಸದೆ ರೈಲ್ವೆ ಇಲಾಖೆ ಚಾಲಕ ಮತ್ತು ಇತರ ಸಿಬ್ಬಂದಿಗೆ ಹೇಗೆ ಕ್ಲೀನ್ ಚಿಟ್ ನೀಡಿದ್ದಾರೆ? ಕಾರ್ಯಕ್ರಮ ನಡೆಯುತ್ತಿರುವುದು ಹಾಗೂ ರೈಲ್ವೆ ಟ್ರ್ಯಾಕ್ ಮೇಲೆ ಅಷ್ಟು ಜನ ನಿಂತಿದ್ದರೂ ಗೇಟ್ಮ್ಯಾನ್ ಏಕೆ ಚಾಲಕನಿಗೆ ರೈಲಿನ ವೇಗವನ್ನು ಕಡಿಮೆ ಮಾಡುವಂತೆ ಮಾಹಿತಿ ನೀಡಲಿಲ್ಲ?” ಎಂದು ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ ಸರ್ಕಾರ ಸೋಮವಾರ ಅಮೃತಸರ ದುರಂತದಲ್ಲಿ ಪ್ರಾಣ ಕಳೆದುಕೊಂಡ 21 ಸಂತ್ರಸ್ತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಧನ ವಿತರಿಸಿದೆ.