ಬೆಂಗಳೂರು, ಅ.22- ರಾಜ್ಯೋತ್ಸವ ದಿನದಿಂದ ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿ ಮಾಡಲೇಬೇಕು ಎಂದು ಪಣತೊಟ್ಟಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನವೆಂಬರ್ ಒಂದರಂದು ಇದಕ್ಕಾಗಿ ವಿಶೇಷ ಅಧಿಸೂಚನೆ ಹೊರಡಿಸಲಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಆಡಳಿತಾತ್ಮಕ ಕಡತಗಳನ್ನು ಸ್ಥಳೀಯ ಭಾಷೆಯಲ್ಲೇ ನೀಡಬೇಕಾಗುತ್ತದೆ. ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿರುವಾಗ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಿದರೆ ಪ್ರಮಾದವಾಗುವುದಿಲ್ಲ. ಮೊದಲು ಅಧಿಕಾರಿಗಳು ಉದಾಸೀನ ಬಿಟ್ಟು ಕನ್ನಡದಲ್ಲಿ ಕಡತ ಸಿದ್ಧಪಡಿಸಲು ಮುಂದಾಗಬೇಕು ಎಂದು ಮುಖ್ಯ ಕಾರ್ಯದರ್ಶಿ ಮೂಲಕ ಅಧಿಕಾರಿ ವರ್ಗಕ್ಕೆ ಸೂಚನೆ ಕೊಡಲಾಗಿದೆ.
ರಾಜ್ಯೋತ್ಸವ ದಿನವಾದ ನವೆಂಬರ್ 1ರಿಂದ ಕಡ್ಡಾಯವಾಗಿ ಅಧಿಕಾರಿಗಳು ಆಡಳಿತಾತ್ಮಕ ಕಡತಗಳನ್ನು ಕನ್ನಡದಲ್ಲೇ ಕಳುಹಿಸಬೇಕು. ಒಂದು ವೇಳೆ ಇಂಗ್ಲಿಷ್ ಸೇರಿದಂತೆ ಬೇರೆ ಭಾಷೆಯಲ್ಲಿ ಕಳುಹಿಸಿದರೆ ಅಂತಹ ಕಡತಗಳನ್ನು ಕಣ್ಣೆತ್ತಿಯೂ ನೋಡದೆ ವಾಪಸ್ ಕಳುಹಿಸುವುದಾಗಿ ಸಿಎಂ ಎಚ್ಚರಿಸಿದ್ದಾರೆ.
ತಮ್ಮ ಕಚೇರಿಗೆ ಮಾತ್ರವಲ್ಲದೆ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೂ ಕನ್ನಡದಲ್ಲೇ ಕಡತಗಳನ್ನು ನೀಡಬೇಕು. ಇನ್ನುಮುಂದೆ ಆಡಳಿತದಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳು, ಅಂತಾರಾಜ್ಯ ವಿವಾದಗಳು, ಕೇಂದ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಕಡತಗಳು ಕನ್ನಡದಲ್ಲೇ ಇರಬೇಕು, ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸುವ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಕಡತಗಳನ್ನು ಕನ್ನಡದಲ್ಲಿ ಸಿದ್ಧಪಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆಡಳಿತದಲ್ಲಿ ಕನ್ನಡವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಕೂಗು ಕೇಳಿಬಂದಿತ್ತಾದರೂ ಸರ್ಕಾರದ ಉದಾಸೀನತೆಯಿಂದಾಗಿ ಇದು ಅನುಷ್ಠಾನವಾಗಿರಲಿಲ್ಲ.
ಕನ್ನಡಕ್ಕೆ ಮೀಸಲು
ಇನ್ನು ಮುಂದೆ ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಶೇಕಡಾ 60ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರ ಹೊಸ ಕಾಯ್ದೆ ಜಾರಿ ಮಾಡಲು ಮುಂದಾಗಿದೆ.
ಮುಂದಿನ ತಿಂಗಳು ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ಉಭಯ ಸದನಗಳಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಡಾ.ಸರೋಜಿನಿ ಮಹಿಷಿ ವರದಿಯಂತೆ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡುವುದು ಇದರ ಮೂಲ ಉದ್ದೇಶವಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ವರದಿ ಹಾಗೂ ಡಾ.ಸರೋಜಿನಿ ಮಹಿಷಿ ವರದಿಗಳ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ.
ನೂತನ ನಿಯಮದಂತೆ ಇನ್ನು ಮುಂದೆ ಜಾಹೀರಾತು, ನಾಮಫಲಕ ಸೇರಿದಂತೆ ಮತ್ತಿತರ ಪ್ರಕಟಣೆಗಳಲ್ಲಿ ಶೇಕಡಾ 60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ.
ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಈ ನಿಯಮ ಕಟ್ಟು ನಿಟ್ಟಾಗಿ ಪಾಲನೆಯಾಗಬೇಕು.