ಕಾವೇರಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣ ಕಣ

ಬೆಂಗಳೂರು, ಅ.22- ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿರುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿರುವ ಈ ಉಪಚುನಾವಣೆಯಲ್ಲಿ ತನ್ನ ಮಗನನ್ನೇ ಕಣಕ್ಕಿಳಿಸುವ ಮೂಲಕ ದೋಸ್ತಿ ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ.

ಮಗನನ್ನು ಗೆಲ್ಲಿಸಲು ಶಿವಮೊಗ್ಗದಲ್ಲೇ ಕಳೆದ ಒಂದು ವಾರದಿಂದ ಬೀಡುಬಿಟ್ಟಿರುವ ಯಡಿಯೂರಪ್ಪ ಅವರಿಗೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಜೆಡಿಎಸ್‍ನ ಹುರಿಯಾಳು ಮಧು ಬಂಗಾರಪ್ಪ ತೀವ್ರ ಪೈಪೆÇೀಟಿ ನೀಡುತ್ತಿರುವುದು ಚುನಾವಣೆಯ ಕಾವು ಹೆಚ್ಚಾಗಿಸಿದೆ.

ಕಣದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಇದ್ದರೂ ಸ್ಪರ್ಧೆ ಏರ್ಪಟ್ಟಿರುವುದು ಬಿ.ವೈ. ರಾಘವೇಂದ್ರ ಮತ್ತು ಮಧು ಬಂಗಾರಪ್ಪ ನಡುವೆ. ಇಲ್ಲಿ ಅಭ್ಯರ್ಥಿಗಳು ನಾಮಕಾವಸ್ತೆ ಎಂಬಂತಾಗಿದೆ. ರಾಘವೇಂದ್ರಗೆ ಅಪ್ಪನ ನಾಮಬಲ ಮತ್ತು ಸಂಘಟನೆ ಬೆಂಬಲಕ್ಕೆ ನಿಂತಿದ್ದರೆ, ಮಧುಗೆ ಇಡೀ ಸರ್ಕಾರವೇ ಬೆನ್ನಿಗೆ ನಿಂತಿರುವುದು ಶ್ರೀರಕ್ಷೆಯಾಗಿದೆ.
ಕಣದಲ್ಲಿರುವ ಮತ್ತೋರ್ವ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಸ್ಪರ್ಧೆಯನ್ನು ಮತದಾರ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ.

ಹೇಗಿದೆ ಶಿವಮೊಗ್ಗ
ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಯುವ ಶಿವಮೊಗ್ಗ ರಾಜ್ಯದಲ್ಲೇ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಡಿದಾಳ್ ಮಂಜಪ್ಪ, ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್ ಹಾಗೂ ಬಿ.ಎಸ್,ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನೀಡಿದ ಈ ಜಿಲ್ಲೆ ಅನಿವಾರ್ಯ ಕಾರಣಗಳಿಂದ ಉಪ ಚುನಾವಣೆ ಎದುರಿಸುವಂತಾಗಿದೆ.
ಯಡಿಯೂರಪ್ಪ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿರುವ ಸ್ಥಾನಕ್ಕೆ ಉಪ ಉಪ ಚುನಾವಣೆ ಎದುರಾಗಿದೆ.
ಪ್ರಾರಂಭದಲ್ಲಿ ರಾಘವೇಂದ್ರಗೆ ಎದುರಾಳಿಗಳೇ ಇಲ್ಲದಂತಹ ವಾತಾವರಣ ನಿರ್ಮಾಣವಾಗಿತ್ತು. ಆದರೆ ಯಾವಾಗ ಸಮ್ಮಿಶ್ರ ಸರ್ಕಾರದ ಒಮ್ಮತದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿದರೋ ಆಗ ಇಡೀ ಕ್ಷೇತ್ರದ ಚಿತ್ರಣವೆ ಬದಲಾಗಿದೆ.
ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಫಸಲು ತೆಗೆದಿತ್ತು. ಭದ್ರಾವತಿ ಹೊರತುಪಡಿಸಿದರೆ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 16.50 ಲಕ್ಷ ಮತದಾರರಿದ್ದು, ಈಡಿಗ, ಲಿಂಗಾಯತ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ, ಒಕ್ಕಲಿಗ ಮತಗಳು ನಿರ್ಣಾಯಕವಾಗಿವೆ.

ಮಾಡು ಇಲ್ಲವೆ ಮಡಿ
ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಹುಮ್ಮಸ್ಸಿನಲ್ಲಿ ಇರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ತವರು ಜಿಲ್ಲೆಯಲ್ಲಿ ಗೆದ್ದು ತಮ್ಮ ಶಕ್ತಿ ಸಾಮಥ್ರ್ಯವನ್ನು ತೋರಿಸಬೇಕಾದ ಅನಿವಾರ್ಯತೆ ಅವರಿಗಿದೆ. ಹೀಗಾಗಿ ಅವರು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ.

ಮಧುಗೆ ಸರ್ಕಾರದ ಬೆಂಗಾವಲು
ಏಕಾಏಕಿ ಎಂಬಂತೆ ದಿವಂಗತ ಮಾಜಿ ಸಿಎಂ ಎಸ್.ಬಂಗಾರಪ್ಪ ಪುತ್ರ, ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಮೈತ್ರಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಅದರಲ್ಲಿಯೂ ಸ್ವತಃ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಶಿವಮೊಗ್ಗ ಕ್ಷೇತ್ರದತ್ತ ವಿಶೇಷ ಚಿತ್ತ ಹರಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಕೂಡ ಜೆಡಿಎಸ್‍ಗೆ ಬೆಂಗಾವಲಾಗಿ ನಿಂತಿದೆ.
ಮುಂದಿನ ವರ್ಷ ಎದುರಾಗಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ಆ ಪಕ್ಷದ ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆಂಬ ಮಾತುಗಳಿವೆ.

ಇನ್ನೊಂದೆಡೆ ಸಮ್ಮಿಶ್ರ ಸರ್ಕಾರ ಕೂಡ ಹಲವು ಅಡೆತಡೆಗಳನ್ನು ಎದುರಿಸುತ್ತಿದೆ. ಒಂದು ವೇಳೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ. ಈ ಕಾರಣದಿಂದ ಯಡಿಯೂರಪ್ಪ ನಡೆಯತ್ತ ಸಮ್ಮಿಶ್ರ ಸರ್ಕಾರದ ನಾಯಕರು ವಿಶೇಷ ಗಮನಹರಿಸಿರುವುದು ಸುಳ್ಳಲ್ಲ. ಇಂತಹ ಸನ್ನಿವೇಶದಲ್ಲಿಯೇ ಯಡಿಯೂರಪ್ಪ ತವರೂರು ಶಿವಮೊಗ್ಗ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿರುವುದು ಹಾಗೂ ಅವರ ಪುತ್ರ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ದೋಸ್ತಿಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಾಲಿಗೆ ಒಂದು ರೀತಿ ವರವಾಗಿ ಪರಿಣಮಿಸಿದೆ. ಈ ಕಾರಣದಿಂದಲೇ ಶಿವಮೊಗ್ಗ ಕ್ಷೇತ್ರದಲ್ಲಿ ದೊಡ್ಡ ರಾಜಕೀಯ ದಾಳವೊಂದನ್ನು ದೋಸ್ತಿಗಳು ಸೇರಿ ಉರುಳಿಸಿದ್ದಾರೆ. ಅದರಂತೆ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪರ ಮನವೊಲಿಸಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಮಣಿಸಿದರೆ ಸಹಜವಾಗಿಯೇ ಬಿಜೆಪಿ ಓಟಕ್ಕೆ, ಅದರಲ್ಲಿಯೂ ಯಡಿಯೂರಪ್ಪ ಅವರ ವೇಗಕ್ಕೆ ಸುಲಭವಾಗಿ ತಡೆ ಹಾಕಬಹುದು. ಅವರು ಕಣ್ಣಿಟ್ಟಿರುವ ಸಿಎಂ ಗಾದಿ ಕೈ ತಪ್ಪಲಿದೆ. ಯಡಿಯೂರಪ್ಪಗೆ ಸಿಎಂ ಹುದ್ದೆ ಸಿಗದಂತಹ ಸ್ಥಿತಿ ಬಿಜೆಪಿಯಲ್ಲಿ ಉದ್ಭವವಾದರೇ, ಲೋಕಸಭೆ ಚುನಾವಣೆ ಪೂರ್ಣಗೊಳ್ಳುವವರೆಗಾದರೂ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಬಹುದಾದ ದೊಡ್ಡ ಕಂಟಕ ತಪ್ಪಲಿದೆ ಎಂಬುವುದು ದೋಸ್ತಿಗಳ ಲೆಕ್ಕಾಚಾರವಾಗಿದೆ.
ಬಿ.ಎಸ್.ವೈ ಹಾಗೂ ಅವರ ಪುತ್ರ ಬಿ.ವೈ.ಆರ್ ಗೂ ವೈಯಕ್ತಿಕವಾಗಿ ಉಪ ಚುನಾವಣೆ ಮಹತ್ವದ್ದಾಗಿದೆ. ಉಪ ಚುನಾವಣೆಯಲ್ಲಿ ಗೆದ್ದರೆ ಜಿಲ್ಲಾ ಬಿಜೆಪಿಯಲ್ಲಿ ತಂದೆ-ಮಗನ ಪ್ರಾಬಲ್ಯ ಹೆಚ್ಚಾಗಲಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಅನಾಯಾಸವಾಗಿ ತಮ್ಮ ಕುಟುಂಬಕ್ಕೆ ಟಿಕೆಟ್ ಗಿಟ್ಟಿಸಿಕೊಳ್ಳಬಹುದು. ರಾಜ್ಯ ರಾಜಕಾರಣದಲ್ಲಿಯೂ ಪ್ರಾಬಲ್ಯ ಮುಂದುವರಿಸಬಹುದಾಗಿದೆ. ಇಲ್ಲದಿದ್ದರೆ ಅಪ್ಪ – ಮಗ ರಾಜಕೀಯ ಸುಳಿಗಳಿಗೆ ಸಿಲುಕಿ ಬೀಳುವುದು ನಿಶ್ಚಿತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಪ್ಪ-ಮಗನ ವಿರುದ್ಧ ಅಪ್ಪ-ಮಗನ ತಂತ್ರಗಾರಿಕೆ !
ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಅಪ್ಪ-ಮಗನ ವಿರುದ್ಧ ಅಪ್ಪ-ಮಗನ ತಂತ್ರಗಾರಿಕೆ ಸಾಕಷ್ಟು ಸದ್ದು ಮಾಡುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ವೈ.ರಾಘವೇಂದ್ರ ಹಾಗೂ ಅವರ ತಂದೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತವರ ತಂದೆ ದೇವೇಗೌಡ ಅವರು ಸಡ್ಡು ಹೊಡೆದು ನಿಂತಿದ್ದಾರೆ. ಶತಾಯಗತಾಯ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಜಯ ಸಾಧಿಸುವ ನಿಟ್ಟಿನಲ್ಲಿ, ದೇವೇಗೌಡ ಹಾಗೂ ಕುಮಾರಸ್ವಾಮಿ ಭಾರೀ ಕಾರ್ಯತಂತ್ರ ನಡೆಸುತ್ತಿದ್ದಾರೆ.

ಸಮ್ಮಿಶ್ರ ಸರ್ಕಾರದ ಮೇಲೆ ಬಿದ್ದಿರುವ ಯಡಿಯೂರಪ್ಪ ಕರಿನೆರಳಿನಿಂದ ಪಾರಾಗಬೇಕಾದರೆ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲೇಬೇಕು ಎಂದು ನಿರ್ಧರಿಸಿರುವ ದೇವೆಗೌಡ-ಹೆಚ್ಡಿಕೆ, ಅತ್ಯಂತ ಶ್ರಮಪಟ್ಟು ತನ್ನ ಪಕ್ಷದ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದ್ದಾರೆ. ಜೆಡಿಎಸ್ ಕಾರ್ಯತಂತ್ರ ಅರಿತಿರುವ ಬಿ.ಎಸ್.ವೈ ರವರು ಕೂಡ ಪ್ರತಿ ಕಾರ್ಯತಂತ್ರ ರೂಪಿಸಿದ್ದಾರೆ. ತವರೂರಲ್ಲಿ ಪುತ್ರನನ್ನು ಗೆಲ್ಲಿಸುವ ಮೂಲಕ ಅಪ್ಪ-ಮಗನಿಗೆ ಏದಿರೇಟು ನೀಡುವ ಹಾಗೂ ಭವಿಷ್ಯದ ಸಿಎಂ ಕ್ಯಾಂಡಿಡೇಟ್ ತಾವೇ ಎಂಬ ಪರೋಕ್ಷ ಸಂದೇಶ ರವಾನಿಸಲು ಮುಂದಾಗಿದ್ದಾರೆ.
ಜೆಡಿಎಸ್ ಹಾಗೂ ಕಾಂಗ್ರೆಸ್‍ನಲ್ಲಿರುವ ಯಡಿಯೂರಪ್ಪ ವಿರೋಧಿ ಪಡೆ, ಶಿವಮೊಗ್ಗ ಕ್ಷೇತ್ರದಲ್ಲಿ ಒಟ್ಟಾಗುತ್ತಿದೆ. ದೇವೇಗೌಡ, ಕುಮಾರಸ್ವಾಮಿಯವರೇ ಬಿ.ಎಸ್.ವೈ. ವಿರೋಧಿಗಳ ಮಾಹಿತಿ ಕಲೆ ಹಾಕಲಾರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸ್ಥಳೀಯ ನಾಯಕರು ಯಡಿಯೂರಪ್ಪ ಕಾರಣದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಬಿರುಸಿನ ಪ್ರಚಾರ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ