ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಬಳ್ಳಾರಿ: ಶ್ರೀರಾಮುಲು ಅವರಿಗೆ ಹೈದರಾಬಾದ್ ಕರ್ನಾಟಕಕ್ಕೆ ನೀಡಲಾಗಿರುವ 371 ಜೆ ಬಗ್ಗೆ ಏನಾದರೂ ತಿಳಿದಿದೆಯೇ… ಅವರಿ ಗೊತ್ತಿದ್ದರೆ ಸೆಕ್ಷನ್ 420 ಬಗ್ಗೆ ತಿಳಿದಿರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ್ವಾಡಿದ್ದಾರೆ.

ಉಪಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಬಳ್ಳಾರಿ ಹಗರಿಬೊಮ್ಮನಹಳ್ಳಿಯಲ್ಲಿ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾರರು ಶ್ರೀರಾಮುಲುರನ್ನು ಆಯ್ಕೆ ಮಾಡಿದ್ದರು. ಆದರೆ, ರಾಜೀನಾಮೆ ಯಾಕೆ ನೀಡಿದರು ? ಯಾವ ಅಧಿಕಾರವನ್ನು ಅವರು ಪೂರ್ಣಾವಧಿ ಮುಗಿಸಲ್ಲ. ಲೋಕಸಭೆಗಾಗಲಿ ಅಥವಾ ವಿಧಾನಸಭೆಗಾಗಲಿ ಶ್ರೀರಾಮುಲು ಅನಿವಾರ್ಯತೆ ಇದೆಯಾ ? ಜೆ.ಶಾಂತಾ ಸಹ ಲೋಕಸಭೆಯಲ್ಲಿ ಪ್ರಶ್ನಿಸಿದ್ದರಾ ? ಇವರೇನು ಅಲಂಕಾರಿಕ ವಸ್ತುಗಳಾ ಅಥವಾ ಉತ್ಸವ ಮೂರ್ತಿಗಳಾ ? ಉಗ್ರಪ್ಪರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಶ್ರೀರಾಮುಲು ರಾಜಕಾರಣದಲ್ಲಿ ಕಣ್ಣು ಬಿಡುವ ಮುಂಚೆಯೇ ಉಗ್ರಪ್ಪನವರು ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮೂಲಕ ರಾಜಕಾರಣಕ್ಕೆ ಬಂದವರು. 1975ರಲ್ಲಿ ಎಮರ್ಜೆನ್ಸಿ ವಿರೋಧಿಸಿ ಜೈಲಿಗೆ ಹೋದ ವ್ಯಕ್ತಿ. ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವಿ ಮತ್ತು ರಾಜ್ಯ ಮಟ್ಟದ ನಾಯಕ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ, ಗಣಿ ಲೂಟಿಕೋರರನ್ನು ಸದೆಬಡಿಯಲು ಗಣಿ ಲೂಟಿ ಬಗ್ಗೆ ಸತ್ಯಶೋಧಕ ಸಮಿತಿಯಿಂದ ಉಗ್ರಪ್ಪ ವರದಿ ನೀಡಿದ ಮೇಲೆ ನಾವು ಬೆಂಗಳೂರಿನಿಂದ ಪಾದಯಾತ್ರೆ ನಡೆಸಿದೆವು. ರಿಪಬ್ಲಿಕ್ ಆಫ್ ಬಳ್ಳಾರಿ ಸೃಷ್ಟಿ ಮಾಡಿದ್ದ ರೆಡ್ಡಿ ಮತ್ತು ಶ್ರೀರಾಮುಲು ನಮಗೆ ಗುಂಡಾಗಳನ್ನು ಬಿಟ್ಟು ಬೆದರಿಕೆ ಹಾಕಿದ್ದರು. ವೇದಿಕೆ ಹಾಕಲೂ ಜಾಗ ನೀಡಲಿಲ್ಲ. ಇಂಥ ದೌರ್ಜನ್ಯ ಮಾಡುವ ನಾಯಕರು ಜಿಲ್ಲೆ ಅಗತ್ಯವಿದೆಯಾ ಎಂದು ಪ್ರಶ್ನಿಸಿದರು.

ಶ್ರೀರಾಮುಲು ಅವರಿಗೆ ಸರಿಯಾಗಿ ಕನ್ನಡ ಮಾತಾಡಲು ಬರುವುದಿಲ್ಲ. ಜನರ ಸಮಸ್ಯೆ ಅರಿಯದವರು ರಾಜಕಾರಣದಲ್ಲಿದ್ದು ಏನು ಪ್ರಯೋಜನ ಎಂದು ಕಿಡಿಕಾರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ