ರಾಮನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಒಗ್ಗೂಡಿಸಲು ಮಹತ್ವದ ಸಭೆ

ಬೆಂಗಳೂರು, ಅ.22- ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ನಿನ್ನೆ ರಾತ್ರಿ ಐತಿಹಾಸಿಕ ಸಭೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಮನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು ಸುಮಾರು 35 ವರ್ಷಗಳಿಂದ ಬಡಿದಾಡಿಕೊಂಡಿದ್ದೇವೆ. ಆದರೆ, ಈಗ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎರಡು ಪಕ್ಷಗಳ ಮುಖಂಡರು ಒಟ್ಟಾಗಿ ಕೆಲಸ ಮಾಡುತ್ತಿದ್ದೆವೆ. ನಮ್ಮ ಗುರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ ತರುವುದು. ಹಾಗಾಗಿ ನಮ್ಮೆಲ್ಲಾ ಜಗಳಗಳನ್ನು ಮರೆತು ನಿನ್ನೆ ರಾತ್ರಿ ರಾಮನಗರದಲ್ಲಿ ಕುಮಾರಸ್ವಾಮಿ ಮತ್ತು ನಾನು ಒಟ್ಟಾಗಿ ಕುಳಿತು ಕಾರ್ಯಕರ್ತರ ಜತೆ ಚರ್ಚೆ ಮಾಡಿದ್ದೇವೆ ಎಂದರು.

ಕೇರಳದಲ್ಲಿ ಅಲ್ಲಿನ ಮಾಜಿ ಸಿಎಂ ಉಮ್ಮನ್‍ಚಾಂಡಿ ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ವಿರುದ್ಧ ಸೋಲಾರ ಹಗರಣದ ಪ್ರಮುಖ ಆರೋಪಿ ಹಾಗೂ ನಟಿ ಎಸ್.ನಾಯರ್ ಅವರು ನೀಡಿರುವ ಅತ್ಯಾಚಾರ ಆರೋಪದ ದೂರು ಆಧರಿಸಿ ವಿಶೇಷ ತನಿಖಾ ತಂಡ ರಚಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ಸುಳ್ಳು ಆರೋಪಗಳು. ರಾಜಕೀಯಕ್ಕಾಗಿ ಬೋಗಸ್ ಕೇಸ್‍ಗಳನ್ನು ದಾಖಲಿಸಲಾಗಿದೆ. ವೇಣುಗೋಪಾಲ್ ಅವರು ಕೇಂದ್ರದ ಮಾಜಿ ಸಚಿವರು, ಪ್ರಭಾವಿ ರಾಜಕಾರಣಿ. ಅವರ ವಿರುದ್ಧ ಸೇಡಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ವಿರುದ್ಧ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಅವರು ಏನು ಹೇಳಿದರೂ ನಡೆಯುತ್ತೇ. ಹೇಳಿಕೊಳ್ಳಲಿ ಎಂದರು.

ಶ್ರೀರಾಮುಲು ಬಳ್ಳಾರಿ ಲೋಕಸಭೆ ಗೆಲ್ಲಲ್ಲು ಪ್ರತಿ ತಂತ್ರ ರೂಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ತಂತ್ರ- ಪ್ರತಿ ತಂತ್ರ ರೂಪಿಸಲು ಎಲ್ಲರಿಗೂ ಅವಕಾಶವಿದೆ. ಎಲ್ಲರಿಗೂ ನಾವೇಕೆ ಅಡ್ಡಿಪಡಿಸೋಣ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ