ಜನಪದ ಗೀತೆಗಳ ಮೂಲ ಧಾಟಿಗಳು ಮರೆಯಾಗುತ್ತಿವೆ: ಡಾ.ಕೋ.ವೆಂ.ರಾಮಕೃಷ್ಣೇಗೌಡ

Varta Mitra News

ಬೆಂಗಳೂರು, ಅ.21- ಆಧುನಿಕತೆಯ ಭರಾಟೆಯಲ್ಲಿ ಜನಪದ ಗೀತೆಗಳ ಮೂಲ ಧಾಟಿಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಪ್ರಾಧ್ಯಾಪಕ ಡಾ.ಕೋ.ವೆಂ.ರಾಮಕೃಷ್ಣೇಗೌಡ ಕರೆ ನೀಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಸಂಘರ್ಷ ಸಮಿತಿ ಜಾನಪದ ಜಂಗಮ ಎಸ್.ಕೆ.ಕರೀಂಖಾನ್ ನೆನಪಿನಲ್ಲಿ ಹಿಲೇರಿನಾ ಜಾಕೊಬ್ ಲೋಬೊ ದತ್ತಿ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಜನಪದ ಗೀತೆಗಳ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಮೂಲ ಜಾನಪದ ಧಾಟಿಗಳನ್ನು ಚಲನಚಿತ್ರಗಳು ಬಳಸಿಕೊಂಡು ಸ್ವತಂತ್ರ ಗೀತೆಗಳನ್ನು ರಚಿಸುತ್ತಿದ್ದಾರೆ. ಇನ್ನೂ ಕೆಲವರು ಜನಪದ ಧಾಟಿಯಲ್ಲಿ ಸ್ವರವಿತ ಕವನಗಳನ್ನು ಪ್ರಚಾರ ಮಾಡುತ್ತಿದ್ದು, ಜನರಿಗೆ ಯಾವುದು ಮೂಲ ಜಾನಪದ, ಯಾವುದು ಜಾನಪದವಲ್ಲ ಎಂಬ ಬಗೆಗೆ ಗೊಂದಲ ಉಂಟಾಗುತ್ತಿದೆ. ಇಂಥ ಗೊಂದಲಗಳಿಂದ ಯುವ ಜನಾಂಗವನ್ನು ಮುಕ್ತಮಾಡಬೇಕಾದರೆ ಮೂಲ ಜನಪದ ಗೀತೆಗಳನ್ನು ಹೆಚ್ಚು ಹೆಚ್ಚು ಪ್ರಚಾರಕ್ಕೆ ತರುವ ಅಗತ್ಯವಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಜಾಕೊಬ್ ಲೋಬೊ ಮಾತನಾಡಿ, ನನ್ನ ಮಡದಿ ಜನಪದ ಸಾಹಿತ್ಯದ ಬಗೆಗೆ ಅಪಾರ ಗೌರವ ಹೊಂದಿದ್ದರು. ಅವರ ಹಿಸರೂ ಉಳಿಯಬೇಕು, ಕರೀಂಖಾನ್ ಅವರ ಪ್ರಯತ್ನವೂ ಸಾಕಾರಗೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಕನ್ನಡ ಸಂಘರ್ಷ ಸಮಿತಿ ಮುಂದಾಗಿರುವುದು ಶ್ಲಾಘನೀಯ ಎಂದರು.

ಜಾನಪದ ಗಾಯಕರಾದ ಬಂಡ್ಲಹಳ್ಳಿ ವಿಜಯಕುಮಾರ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಪ್ರಕಾಶಮೂರ್ತಿ, ಶಾಂತಲಾ ಸುರೇಶ್, ಇಂದಿರಾ ಶರಣ್ ಜಮ್ಮಲದಿನ್ನಿ, ಡಾ.ವರದಾ ಶ್ರೀನಿವಾಸ್, ಎಲ್.ಗಂಗಾಧರ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ