ಬೆಂಗಳೂರು, ಅ.20-ಲಿಂಗಾಯತ ವೀರಶೈವ ಧರ್ಮದ ಪ್ರತ್ಯೇಕ ಸ್ಥಾನಮಾನದ ವಿಚಾರ ಸಚಿವ ಸಂಪುಟದ ಸಾಮೂಹಿಕ ನಿರ್ಧಾರ. ಅದಕ್ಕೂ ಮತ್ತು ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಲಿಂಗಾಯತ ಧರ್ಮದ ವಿಭಜನೆ ವಿಷಯದಿಂದ ತಪ್ಪಾಗಿದೆ ಎಂದು ನೀಡಿರುವ ಬಹಿರಂಗ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಾನು ಧರ್ಮ, ಜಾತಿಯನ್ನು ವಿಭಜನೆ ಮಾಡಿಲ್ಲ, ಮಾಡುವುದೂ ಇಲ್ಲ.
ಆಯಾ ಸಮುದಾಯಗಳ ಬೇಡಿಕೆ ಆಧರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು. ಶಿಫಾರಸು ಮಾಡುವ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಸಾಮೂಹಿಕವಾಗಿ ತೆಗೆದುಕೊಳ್ಳಲಾಯಿತು. ಡಿ.ಕೆ.ಶಿವಕುಮಾರ್ ಅವರು ಆಗ ಒಪ್ಪಿಗೆ ನೀಡಿದ್ದರು ಎಂದ ಮೇಲೆ ಅದು ಸಾಮೂಹಿಕ ನಿರ್ಧಾರವೇ ಆಗಿದೆ. ಈಗ ಅವರು ಯಾವ ಸಂದರ್ಭದಲ್ಲಿ, ಯಾವ ಕಾರಣಕ್ಕೆ ಕ್ಷಮಾಪಣೆ ಕೇಳಿದ್ದಾರೋ ಗೊತ್ತಿಲ್ಲ.
ವರು ಮತ್ತು ಎಂ.ಬಿ.ಪಾಟೀಲ್ ಅವರು ಪರಸ್ಪರ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ಲಿಂಗಾಯತ-ವೀರಶೈವ ಧರ್ಮದ ಪ್ರತ್ಯೇಕ ಧರ್ಮದ ಶಿಫಾರಸ್ಸಿಗೂ, ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಅದು ಸರ್ಕಾರದ ನಿರ್ಧಾರ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಆಗ ನಮ್ಮ ಸರ್ಕಾರ ತೆಗೆದುಕೊಂಡ ನಿರ್ಣಯದ ಬಗ್ಗೆ ನನಗೆ ಯಾವುದೇ ಪಶ್ಚಾತಾಪ ಇಲ್ಲ. ನನ್ನನ್ನು ಯಾರೂ ತೇಜೋವಧೆ ಮಾಡಲು ಸಾಧ್ಯವಿಲ್ಲ ಏಕೆಂದರೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ ನೋಡದ ಉಭಯ ನಾಯಕರು:
ಧರ್ಮ ರಾಜಕಾರಣ ವಿಷಯವಾಗಿ ಹೇಳಿಕೆ ನೀಡಿದ್ದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಇಂದು ಜೆಡಿಎಸ್-ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೊತೆಯಾಗಿ ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದರೂ ಪರಸ್ಪರ ಮುಖ ಕೊಟ್ಟು ಮಾತನಾಡದೆ ದೂರವೇ ಉಳಿದರು.
ಎಲ್ಲರಿಗಿಂತ ಮೊದಲು ಆಗಮಿಸಿದ ಡಿಕೆಶಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಂದಾಗ ಕುಳಿತಲ್ಲಿಂದ ಎದ್ದು ಹೋಗಿ ಆತ್ಮೀಯವಾಗಿ ಬರಮಾಡಿಕೊಂಡರು. ಆನಂತರ ಬಂದ ಸಿದ್ದರಾಮಯ್ಯ ಅವರನ್ನು ಪರಮೇಶ್ವರ್ ಅವರು ಎದ್ದು ಹೋಗಿ ಬರಮಾಡಿಕೊಂಡರಾದರೂ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಅವರನ್ನು ಎದುರುಗೊಳ್ಳಲಿಲ್ಲ. ನಂತರ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರು ದೇವೇಗೌಡರ ಪಕ್ಕ ಕುಳಿತರೆ, ಡಿ.ಕೆ.ಶಿವಕುಮಾರ್ ಕುಮಾರಸ್ವಾಮಿಯವರ ಪಕ್ಕ ಕೊನೆಯ ಕುರ್ಚಿಯಲ್ಲಿ ಕುಳಿತರು.
ಇಡೀ ಪತ್ರಿಕಾಗೋಷ್ಠಿಯುದ್ದಕ್ಕೂ ಉಭಯ ನಾಯಕರು ಪರಸ್ಪರ ಮುಖ ಕೊಟ್ಟು ಮಾತನಾಡಲಿಲ್ಲ. ಪತ್ರಿಕಾಗೋಷ್ಠಿ ನಡುವೆ ಸಿದ್ದರಾಮಯ್ಯ ಅವರಿಗೆ ಧರ್ಮರಾಜಕಾರಣದ ಕುರಿತು ಪ್ರಶ್ನೆ ಎದುರಾದಾಗ ಸಿಟ್ಟಾದ ಅವರು, ಆ ವಿಷಯಗಳನ್ನು ಚರ್ಚೆ ಮಾಡಲು ಇದು ವೇದಿಕೆಯಲ್ಲ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತ್ಯೇಕವಾಗಿಯೇ ಪ್ರತಿಕ್ರಿಯೆ ನೀಡುತ್ತೇನೆ ಎಂದು ಗರಂ ಆಗಿ ಏರುದನಿಯಲ್ಲಿ ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಠಿ ಮುಗಿದ ಬಳಿಕ ಪ್ರತ್ಯೇಕ ಪ್ರತಿಕ್ರಿಯೆ ನೀಡಲು ಸುಮಾರು ಹೊತ್ತು ಸತಾಯಿಸಿದ ಸಿದ್ದರಾಮಯ್ಯ ಕೊನೆಗೆ ಮಾಧ್ಯಮಗಳಿಗೆ ಎದುರಾಗಿ ನಿಂತರು. ಅತ್ಯಂತ ಜಾಣ್ಮೆಯಿಂದ ಯಾರಿಗೂ ನೇರವಾಗಿ ತಾಕದಂತೆ ತಮ್ಮದೇ ಆದ ಶೈಲಿಯಲ್ಲಿ ನಾಜೂಕಿನ ಉತ್ತರ ಕೊಟ್ಟು ತೆರೆ ಎಳೆಯುವ ಪ್ರಯತ್ನ ಮಾಡಿದರು. ಆದರೂ ಮಾಧ್ಯಮಗಳು ಪಟ್ಟು ಬಿಡದೆ ಡಿ.ಕೆ.ಶಿವಕುಮಾರ್ ಹೇಳಿಕೆ ವಿಷಯವಾಗಿ ಪದೇ ಪದೇ ಕೆದಕಿದಾಗ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕೆಂದೇನಿಲ್ಲ. ಅದು ಸಂಪುಟ ಸಭೆಯ ಸಾಮೂಹಿಕ ನಿರ್ಧಾರ. ಪದೇ ಪದೇ ಕೆಣಕಿ ಪ್ರಶ್ನೆ ಕೇಳಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿ ನಿರ್ಗಮಿಸಿದರು.