ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ನಮ್ಮ ಗುರಿ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.20-ಜೆಡಿಎಸ್-ಕಾಂಗ್ರೆಸ್ ನಾಯಕರು ಕಾಯ, ವಾಚಾ, ಮನಸಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಪ್ರಮುಖ ಗುರಿ ಎಂದರು.

ಖಾಸಗಿ ಹೊಟೇಲ್‍ನೊಂದಿಗೆ ಜೆಡಿಎಸ್ ನಾಯಕರ ಜೊತೆ ಜಂಟಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಂಯ್ಯ ಅವರು, ಬಿಜೆಪಿಯ ಸುಳ್ಳು ಹೇಳಿಕೆಗಳು ಮತ್ತು ಕೋಮುವಾದಿತನ ಎರಡನ್ನೂ ಮರೆತುಬಿಟ್ಟರೂ ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಇಂದು ಜನಸಾಮಾನ್ಯರು ಬದುಕಲಾಗದಂತಹ ಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಿಸಿದೆ. ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಜನರಿಗೆ ನೀಡಿದ ಭರವಸೆಗಳನ್ನು ಮೋದಿಯವರು ಈಡೇರಿಸಿಲ್ಲ. ರೈತರ, ಜನಸಾಮಾನ್ಯರ ಬದುಕು ದುಸ್ತರವಾಗಿದೆ.

ಸಮಸ್ಯೆ ಬಗೆಹರಿಸುವುದಿರಲಿ, ಅದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಪ್ರಧಾನಿಯವರಿಗಿಲ್ಲ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ಆತಂಕದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇಬೇಕಿದೆ. ಜಾತ್ಯತೀತ ಶಕ್ತಿಗಳು ಒಂದಾಗಬೇಕಿದೆ. ಹಾಗಾಗಿ ಜೆಡಿಎಸ್-ಕಾಂಗ್ರೆಸ್ ಒಂದಾಗಿದ್ದೇವೆ ಎಂದು ಹೇಳೀದರು.

ಕೆಳಹಂತದ ಕಾರ್ಯಕರ್ತರು ಪರಸ್ಪರ ಹೋರಾಟ ಮಾಡಿರಬಹುದು. ಆದರೆ ಈಗ ಒಂದಾಗುವ ಅನಿವಾರ್ಯತೆ ಇದೆ. ನಾವು ಒಟ್ಟಾಗಿ ಚುನಾವಣೆ ಪ್ರಚಾರ ಮಾಡುತ್ತೇವೆ. ಅಗತ್ಯ ಇರುವ ಕಡೆ ಬಹಿರಂಗ ಸಮಾವೇಶಗಳಲ್ಲಿ ಭಾಗವಹಿಸುತ್ತೇವೆ. ಶಿವಮೊಗ್ಗ, ಬಳ್ಳಾರಿ, ಜಮಖಂಡಿ, ಮಂಡ್ಯದಲ್ಲಿ ನನ್ನ ಕಾರ್ಯಕ್ರಮ ನಿಗದಿಯಾಗಿದೆ. ಅಗತ್ಯಬಿದ್ದರೆ ರಾಮನಗರಕ್ಕೂ ತೆರಳುತ್ತೇನೆ. ಜೆಡಿಎಸ್ ನಾಯಕರು ಕೂಡ ಕಾಂಗ್ರೆಸ್ ಕ್ಷೇತ್ರಗಳಿಗೆ ಬಂದು ಪ್ರಚಾರ ಮಾಡುತ್ತಾರೆ. ಶಿವಮೊಗ್ಗದಲ್ಲಿ ಅ.30 ರಂದು ಜಂಟಿಯಾಗಿ ಪ್ರಚಾರದಲ್ಲಿ ಭಾಗವಹಿಸುತ್ತೇವೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ