ಬೆಂಗಳೂರು,ಅ.20-ಪ್ರತ್ಯೇಕ ಲಿಂಗಾಯಿತ ಧರ್ಮ ಕುರಿತಂತೆ ತಾವು ನೀಡಿರುವ ಹೇಳಿಕೆಗೆ ಈಗಲೂ ಬದ್ದ ಎಂದು ಹೇಳಿರುವ ಸಚಿವ ಡಿ.ಕೆ.ಶಿವಕುಮಾರ್, ಯಾವುದೇ ಕಾರಣಕ್ಕೂ ಯಾರೊಬ್ಬರ ಕ್ಷಮಾಪಣೆ ಕೇಳುವುದಿಲ್ಲ. ಸಾಕಷ್ಟು ಯೋಚಿಸಿಯೇ ಹೇಳಿದ್ದೇನೆ ಎಂದು ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾನು ಯಾರನ್ನೂನೋಯಿಸಲು ಇಲ್ಲವೇ ಇನ್ನೊಬ್ಬರಿಂದ ಹೊಗಳಿಸಿಕೊಳ್ಳಲು ಈ ಹೇಳಿಕೆಯನ್ನು ನೀಡಿಲ್ಲ. ರಾಜಕಾರಣಿಗಳು ಧರ್ಮ ಮತ್ತು ಜಾತಿ ವಿಷಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂಬುದಕ್ಕೆ ಈಗಲೂ ಬದ್ದವಾಗಿದ್ದೇನೆ. ನಾನು ಯಾರನ್ನು ಯಾವ ಕಾರಣಕ್ಕಾಗಿ ಕ್ಷಮೆ ಕೇಳಬೇಕೆಂದು ಪ್ರಶ್ನೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನು ನಾನು ಮೆಚ್ಚಿಸಲು ಹೇಳಿಕೆ ಕೊಟ್ಟಿಲ್ಲ. ಯಾವುದನ್ನು ಹೇಳಬೇಕೋ, ಯಾವುದನ್ನು ಹೇಳಬಾರದು ಎಂಬ ವಿವೇಕ ನನಗಿದೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿಯೇ ಆಲೋಚಿಸಿ ಹೇಳಿಕೆ ಕೊಟ್ಟಿದ್ದೇನೆ. ನನ್ನ ಪರವಾಗಿ ಇರುವವರು ಹೊಗಳುತ್ತಾರೆ, ವಿರೋಧ ಇರುವವರು ವಿರೋಧಿಸುತ್ತಾರೆ. ರಾಜ್ಯಕಾರಣದಲ್ಲಿ ಇದೆಲ್ಲವೂ ಸರ್ವೆ ಸಾಮಾನ್ಯ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿಮ್ಮ ಪರ ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಾನು ಯಾವುದೇ ಪಕ್ಷವನ್ನು ಓಲೈಸಲು ಈ ಹೇಳಿಕೆ ಕೊಟ್ಟಿಲ್ಲ. ಜಾತಿ, ಧರ್ಮದ ವಿಷಯವನ್ನು ನೋಡಿಕೊಳ್ಳಲು ಮಠಾಧೀಶರು ಇರುತ್ತಾರೆ. ರಾಜಕಾರಣಿಗಳಿಗೆ ಮಾಡಲು ಕೆಲಸವಿರುತ್ತದೆ. ಸುಮ್ಮನೆ ನಾವು ಏಕೆ ಸಮಯ ವ್ಯರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದರು.
ನಾನು ವೀರಶೈವ ಲಿಂಗಾಯಿತ ವಿಷಯದಲ್ಲಿ ಮಾತ್ರವಲ್ಲ. ನಿನ್ನೆ ಒಕ್ಕಲಿಗ ಸಮುದಾಯದಲ್ಲಿ ವಿವಾದ ಉಂಟಾದಾಗ ಸಮಸ್ಯೆಯನ್ನು ಪರಿಹರಿಸಲು ಮಧ್ಯಪ್ರವೇಶಿಸಿದ್ದೆ. ಕೊನೆಗೆ ಇದು ಕಪ್ಪೆಯನ್ನು ಹಿಡಿದು ತಕ್ಕಡಿಯಲ್ಲಿಟ್ಟಂಗಾಯಿತು ಎಂದು ಅಭಿಪ್ರಾಯಪಟ್ಟರು.
ಮಾತೆ ಮಹಾದೇವಿ ಅವರು ನನ್ನನ್ನು ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ನಾನು ಯಾರ ಮನಸ್ಸನ್ನು ನೋಯಿಸಿಲ್ಲ. ಉಪಚುನಾವಣೆ ಗಮನದಲ್ಲಿಟ್ಟುಕೊಂಡು ನಮ್ಮ ಪಕ್ಷಕ್ಕೆ ಯಾವ ಲಾಭ-ನಷ್ಟದ ಯೋಜನೆಯನ್ನೂ ಮಾಡಿ ಇದನ್ನು ಹೇಳಿಲ್ಲ. ನನ್ನ ಈ ಹೇಳಿಕೆ ಸಂಪೂರ್ಣವಾಗಿ ವೈಯಕ್ತಿಕವಾದದ್ದು. ಇದಕ್ಕೆ ರಾಜಕಾರಣ ಬೆರೆಸಬಾರದು ಎಂದು ಮನವಿ ಮಾಡಿದರು.
ಜಾತ್ಯತೀತ ಪಕ್ಷಗಳು ಒಂದಾಗಬೇಕು:
ದೇಶದ ಜನತೆಯ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಬದಲಾಯಿಸಲು ದೇಶದೆಲ್ಲೆಡೆ ಜಾತ್ಯತೀತ ಪಕ್ಷಗಳು ಒಗ್ಗೂಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ನಾವು ಮತ್ತು ಜೆಡಿಎಸ್ನವರು ಒಂದಾಗಿ ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ.
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳ ಮುಖಂಡರು ಒಂದಾಗಿ ಚುನಾವಣೆಯನ್ನು ಎದುರಿಸುತ್ತೇವೆ. ಪ್ರಸ್ತುತದ ದಿನಗಳಲ್ಲಿ ಜಾತ್ಯತೀತ ಪಕ್ಷಗಳು ತಮ್ಮ ಹಿತಾಸಕ್ತಿಯನ್ನು ಮರೆತು ಒಂದಾಗಬೇಕಾದ ಅಗತ್ಯವಿದೆ ಎಂದರು.
ರಾಮನಗರದಲ್ಲಿ ನಾಳೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಗುವುದು. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ಧರಾಮಯ್ಯನವರು ರಾಮನಗರದಲ್ಲಿ ಚುನಾವಣೆ ನಡೆಸಬೇಕಾದ ಅಗತ್ಯವಿಲ್ಲ.ನಾನು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ನಾಯಕರೇ ನೋಡಿಕೊಳ್ಳುತ್ತಾರೆ. ಸಿದ್ಧರಾಮಯ್ಯನವರಿಗೆ ಮಂಡ್ಯ, ಶಿವಮೊಗ್ಗ, ಬಳ್ಳಾರಿ, ಜಮಖಂಡಿ ಕ್ಷೇತ್ರಗಳಲ್ಲಿ ಹೆಚ್ಚು ಸಮಯ ಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಸಿದ್ಧರಾಮಯ್ಯ ಇಂದು ಪರಸ್ಪರ ಮುಖಾಮುಖಿಯಾಗುತ್ತಿರುವುದು ಜಾತ್ಯತೀತ ಪಕ್ಷಗಳು ಒಂದಾಗುತ್ತಿರುವುದುಕ್ಕೆ ಸಾಕ್ಷಿಯಾಗಿದೆ. ಕಳೆದ 10 ವರ್ಷಗಳಿಂದ ದೇವೇಗೌಡರು ಮತ್ತು ಸಿದ್ದರಾಮಯ್ಯನವರು ಪರಸ್ಪರ ಎದುರಾಳಿಗಳಾಗಿದ್ದರು. ನಾನು 1985ರಿಂದ ಗೌಡರ ಕುಟುಂಬದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಸಮ್ಮಿಶ್ರ ಸರ್ಕಾರ ಮತ್ತು ರಾಜ್ಯದ ಹಿತದೃಷ್ಟಿಯಿಂದ ನಮ್ಮ ಸಂಘರ್ಷಗಳನ್ನು ಮರೆತು ಒಂದಾಗಿದ್ದೇವೆ ಎಂದರು.
ರೋಗಿಗಳಿಗೆ ತೊಂದರೆಯಿಲ್ಲ:
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಾಣಂತಿಯರು ಮತ್ತು ರೋಗಿಗಳಿಗೆ ಹಾಸಿಗೆ ನೀಡದೆ ನೆಲದಲ್ಲಿ ಕೂರಿಸಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಪಕ್ಕದ ಕಟ್ಟಡ ನಿರ್ಮಾಣವಾಗುತ್ತಿರುವುದರಿಂದ ಈ ರೀತಿ ತೊಂದರೆಯಾಗಿದೆ. ಈ ಬಗ್ಗೆ ವರದಿ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.