ನಾಲ್ಕು ಕ್ರೀಡಾಂಗಣ ನಿರ್ಮಾಣಕ್ಕೆ ಹಣ ಮಂಜೂರು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಕಂಠೀರವ ಕ್ರೀಡಾಂಗಣ ಮಾದರಿಯಲ್ಲೇ ನಗರದ ನಾಲ್ಕು ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು 17 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಕಂಠೀರವ ಕ್ರೀಡಾಂಗಣದಲ್ಲಿ ನವೀಕರಣಗೊಂಡ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಬಜೆಟ್‌ನಲ್ಲಿ ಕಂಠೀರವ ಕ್ರೀಡಾಂಗಣ ಮಾದರಿಯಲ್ಲೇ ನಗರದ ದೇವನಹಳ್ಳಿ, ತಾವರೆಕೆರೆ, ಗುಂಜೂರು, ಎಚ್.ಎಸ್‌ಆರ್ ಲೇಔಟ್‌ನಲ್ಲಿ ಕ್ರೀಡಾಂಗಣ ನಿರ್ಮಾಣಲ್ಕೆ ಹಣ ಮಂಜೂರು ಮಾಡಿದ್ದು, ಎರಡು ಜಾಗದಲ್ಲಿ ಕೆಲಸ ಶುರು ಮಾಡುವ ಹಂತ ತಲುಪುದ್ದೇವೆ ಎಂದರು.

ಕಂಠೀರವ ಕ್ರೀಡಾ ಸಂಕಿರ್ಣವನ್ನು ಅಭಿವೃದ್ಧಿ ಪಡಿಸಲು ಹಲವು ಕಾರ್ಯಕ್ರಮ ಹಾಕಿಕೊಂಡಿದ್ದು, ಇಲ್ಲಿನ ಶೌಚಾಲಯ ಮರುನಿರ್ಮಾಣಕ್ಕೆ 2 ಕೋಟಿ ರು. ಹಣ ವೆಚ್ಚ ಮಾಡಲಾಗಿದೆ.

10 ವರ್ಷ ಹಳೆಯ ಸಿಂಥೆಟಿಕ್ ಟ್ರಾಕ್ ಮೇಲ್ದರ್ಜೆಗೇರಿಸಲು , 3.5 ಕೋಟಿ ರು.ಗಳಿಗೆ ಟೆಂಡರ್ ಕರೆಯಲಾಗಿದೆ.‌ ಒಂದು ತಿಂಗಳೊಳಗಾಗಿ ಕೆಲಸ ಪ್ರಾರಂಭ ಮಾಡಲಾಗುವುದು. ಕಂಠೀರವ ಕ್ರೀಡಾಂಗಣವನ್ನು 5.77 ಕೋಟಿ ರು. ಹಣವನ್ನು ನವೀಕರಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಇದರ ಭಾಗವಾಗಿ ಮೂರು ಬ್ಯಾಸ್ಕೆಟ್‌ ಬಾಲ್ ಕೋಟ್‌ನನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲಾಗಿದೆ.

ಇಂಡಿಯನ್ ಪಾರ್ಲಿಮೆಂಟರಿ ಕಮಿಟಿ ಅವರು ಭೇಟಿ ನೀಡಿ ಬ್ಯಾಸ್ಕೆಟ್‌ ಬಾಲ್ ಕೋಟ್‌ಗೆ ಉತ್ತಮ ಕೋಟ್‌ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಲ್ದರ್ಗೆ ಏರಿಸಿರುವ ಬ್ಯಾಡ್ಮಿಟನ್ ಕೋಟ್‌ಗಳಿಗೆ ನ್ಯಾಷನಲ್ ಬ್ಯಾಡ್ಮಿಟನ್ ಅಸೋಸಿಯೇಷನ್ 5 ಸ್ಟಾರ್ ಕೊಟ್ಟಿದೆ ಎಂದರು.

ಕಂಠೀರವ ಸ್ಟೇಡಿಯಂ‌ನಲ್ಲಿ 2 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಜಿಮ್‌ ನಿರ್ಮಿಸಿದ್ದು, ಅಮೇರಿಕಾದಿಂದ ಉಪಕರಣ ತರಿಸಿದ್ದೇವೆ. ಇನ್ನೊಂದು ವಾರದಲ್ಲಿ ಇದನ್ನು ಉದ್ಘಾಟಿಸಲಾಗುವುದು ಎಂದರು.

ಅಕ್ಟೋಬರ್ 28 ರಿಂದ ನ. 3 ರವರೆಗೆ ಫೀಬಾ ಏಷಿಯನ್ ಮಹಿಳಾ ಬ್ಯಾಸ್ಕೆಟ್‌ ಬಾಲ್ ಪಂದ್ಯಾವಳಿ ನಡೆಯಲಿದ್ದು, ಇದರ ಉದ್ಘಾಟನೆ 27 ರಂದು ಚಾನ್ಸರಿಯಲ್ಲಿ ಸಂಜೆ 6.30 ಕ್ಕೆ ನೆರವೇರಲಿದೆ. ರಾಜ್ಯಪಾಲರು ಉದ್ಘಾಟಿಸಲಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ