ಅಮೃತಸರ: ಅಮೃತಸರದಲ್ಲಿ ದಸರಾ ಉತ್ಸವದ ವೇಳೆ ನಡೆದ ಭೀಕರ ರೈಲು ದುರಂತ ನಿರ್ಲಕ್ಷ್ಯದಿಂದ ಆದ ಅಪಘಾತವಾಗಿದೆ ಎಂದು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ.
ರೈಲು ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇದು ನಿರ್ಲಕ್ಷ್ಯದಿಂದಾದ ಅಪಘಾತ. ಆದರೆ, ಇದರ ಹಿಂದೆ ಯಾವ ದುರುದ್ದೇಶಗಳೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಚೌರಾ ಬಜಾರ್ ಬಳಿ ನಡೆಯುತ್ತಿದ್ದ ದಸರಾ ಉತ್ಸವವದಲ್ಲಿ ಭಾಗವಹಿಸಿದ್ದ ಜನರ ಮೇಲೆ ರೈಲು ಹರಿದಿತ್ತು. ಈ ಘಟನೆಯಲ್ಲಿ 60 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದವರನ್ನು ಸ್ಥಳೀಯ ಗುರುನಾನಕ್ ದೇವ್ ಆಸ್ಪತ್ರೆ ಮತ್ತು ಸಿವಿಲ್ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಇದೊಂದು ದುರದೃಷ್ಟಕರ ಘಟನೆ. ಅಲ್ಲದೆ, ಇದು ಅಪಘಾತ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು. ಇದರ ಹಿಂದಿನ ಕಾರಣ ನಿರ್ಲಕ್ಷ್ಯ. ಆದರೆ, ಯಾವುದೇ ದುರುದ್ದೇಶಗಳೂ ಇದರ ಹಿಂದಿಲ್ಲ. ರೈಲು ಅತ್ಯಂತ ವೇಗದಲ್ಲಿ ಬಂದ ಕಾರಣ ಕ್ಷಣಮಾತ್ರದಲ್ಲಿ ಈ ದುರಂತ ಸಂಭವಿಸಿ ಹೋಗಿದೆ. ರೈಲು ಎಚ್ಚರಿಕೆಯ ಗಂಟೆಯನ್ನೂ ಮೊಳಗಿಸಿಲ್ಲ. ಘಟನೆ ಸಂಬಂಧ ಮುಖ್ಯಮಂತ್ರಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಹೇಳಿದರು.