ಬೆಂಗಳೂರು, ಅ.18- ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, 9 ದಿನಗಳ ದಸರಾ ಹಬ್ಬಕ್ಕೆ ನಾಳೆ ವಿದ್ಯುಕ್ತ ತೆರೆ ಬೀಳಲಿದೆ.
ಸಾಂಸ್ಕøತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಜಂಬೂಸವಾರಿಯನ್ನು ಕಣ್ತುಂಬಿಸಿಕೊಳ್ಳಲು ದೇಶವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತ ಕ್ರಮವನ್ನು ಕೈಗೊಂಡಿದೆ.
ಮಧ್ಯಾಹ್ನ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮೊದಲು 2.30ರಿಂದ 3.16ರವರೆಗೆ ಸಲ್ಲುವ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಂದಿ ಧ್ವಜ ಪೂಜೆಯನ್ನು ನೆರವೇರಿಸುವರು.
ಜಂಬೂ ಸವಾರಿಯನ್ನು ಈ ಬಾರಿಯೂ ಅರ್ಜುನ ಮುನ್ನಡೆಸಲಿದ್ದು, ಸುಮಾರು 750 ಕೆಜಿ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗಲಿದ್ದಾನೆ.
ಬಲರಾಮ ಆನೆ, ಗಂಡಬೇರುಂಡ ಇರುವ ನಿಶಾನೆ ಹಿಡಿದು ಮುಂದೆ ಸಾಗಿ ಬರುತ್ತಾನೆ. ಆನಂತರ ಕೆಲವು ಸ್ತಬ್ಧ ಚಿತ್ರಗಳು, ಸಾಂಸ್ಕøತಿಕ ಕಲಾ ತಂಡಗಳು, ಜಾನಪದ ಕಲಾ ತಂಡಗಳು ಸಾಗಿದ ನಂತರ ಮೂರು ಕುಂಕಿ ಆನೆಗಳು ಸಾಗಿಬರಲಿವೆ.
ಬಳಿಕ ನಾಡಿನ ಕಲೆ, ಸಂಸ್ಕøತಿ ಬಿಂಬಿಸುವ 42ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಸಾಗಿಬರಲಿವೆ. ಜಾನಪದ ಕಲಾ ತಂಡಗಳು, ಹೋಂಗಾರ್ಡ್, ಮೌಂಟೆಡ್ ಪೆÇಲೀಸ್, ಕೆಎಸ್ಆರ್ಪಿ, ಸಿಎಆರ್, ಆರ್ಪಿಎಸ್, ಮೈಸೂರು ಪೆÇಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ಸೇವಾ ಪಡೆಗಳು ಸಗಿ ಬರಲಿವೆ.
ಇವುಗಳ ಹಿಂದೆ ಮತ್ತೆ ಮೂರು ಆನೆಗಳು ಬರಲಿವೆ. ಆನಂತರ ಅತ್ಯಂತ ಪ್ರಮುಖ ಘಟ್ಟವಾದ ಕ್ಯಾಪ್ಟನ್ ಅರ್ಜುನ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಗಜ ಗಾಂಭೀರ್ಯದಿಂದ ಬರುವನು.
ಮಧ್ಯಾಹ್ನ 3.40ರಿಂದ 4.10ರ ಶುಭ ಕುಂಭ ಲಗ್ನದಲ್ಲಿ ಅರಮನೆ ಆವರಣದಲ್ಲಿ ಸಿದ್ಧಪಡಿಸಿರುವ ವಿಶೇಷ ವೇದಿಕೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರರು ಅಂಬಾರಿ ಹೊತ್ತ ಅರ್ಜುನನಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುವರು.
ಸ್ತಬ್ಧ ಚಿತ್ರಗಳ ವಿವರ:
ಪ್ರತಿ ಜಿಲ್ಲೆಗಳಿಂದ ತಲಾ ಒಂದೊಂದು ಹಾಗೂ 12 ಸರ್ಕಾರಿ ಇಲಾಖೆಯಿಂದ ಒಂದೊಂದು ಸ್ತಬ್ಧ ಚಿತ್ರಗಳು ಪ್ರದರ್ಶನವಾಗಲಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಕಾನೂನು ಸೇವಾ ಪ್ರಾಧಿಕಾರ ಹಾಗೂ ಎನ್ಸಿಸಿ ಸ್ತಬ್ಧ ಚಿತ್ರ ರೂಪಿಸಿದ್ದು, ಒಟ್ಟು 600 ಕಲಾವಿದರಿಂದ ಸ್ತಬ್ದ ಚಿತ್ರಗಳು ಭಾಗವಹಿಸಿವೆ.
ಕಲೆ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪ, ಅಂತರ್ಜಲ ಸಂರಕ್ಷಣೆ, ಅರಣ್ಯೀಕರಣ, ಜಾನಪದ ಹಬ್ಬಗಳ ಪರಂಪರೆ ಹಾಗೂ ನಾಡು- ನುಡಿಗೆ ಶ್ರಮಿಸಿದ ಯಶೋಗಾಥೆ ಆಶಯಗಳೊಂದಿಗೆ ಸ್ತಬ್ಧ ಚಿತ್ರಗಳು ಮೂಡಿವೆ.
ಕಾನೂನು ಸೇವಾ ಪ್ರಾಧಿಕಾರ ಹಾಗೂ ಎನ್ಸಿಸಿ ಬೆಟಾಲಿಯನ್ಗಳು ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿಗೆ ಹೆಜ್ಜೆ ಹಾಕುತ್ತಿರುವುದು ವಿಶೇಷ. ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳು ತಲಾ ಒಂದು ಹಾಗೂ ವಿವಿಧ ಇಲಾಖೆಗಳ 12 ಸ್ತಬ್ಧಚಿತ್ರಗಳು ದಸರಾ ಮೆರವಣಿಗೆಯಲ್ಲಿ ನೋಡುಗರ ಗಮನ ಸೆಳೆಯಲಿವೆ.
15 ದಿನಗಳಿಂದ ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಸ್ತಬ್ಧಚಿತ್ರಗಳ ತಯಾರಿ ನಡೆದವು. ತಮಿಳು ನಾಡು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ 500 ರಿಂದ 600 ಕಲಾವಿದರು ನಿರಂತರ ತಯಾರಿಕೆ ಕಾರ್ಯದಲ್ಲಿ ತೊಡಗಿಕೊಂಡರು. ಇಂದು ಸಂಜೆಯೊಳಗೆ ಎಲ್ಲವೂ ಅರಮನೆ ಆವರಣಕ್ಕೆ ಸೇರಲಿವೆ.
ತುಮಕೂರಿನಿಂದ ಶಿವಕುಮಾರ ಸ್ವಾಮೀಜಿ:
ಮೈಸೂರಿನಿಂದ ಗೋಲ್ಡನ್ ಟೆಂಪಲ್, ಉಡುಪಿಯಿಂದ ಪರಶುರಾಮನ ಸೃಷ್ಟಿಯ ತುಳುನಾಡು, ಧಾರಾವಾಡದಿಂದ ದ.ರಾ.ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ, ಹಾವೇರಿಯಿಂದ ರಾಣೆಬೆನ್ನೂರು ಅಭಯಾರಣ್ಯ- ಬಂಕಾಪುರ ನವಿಲುಧಾಮ, ಕಾರವಾರದ ಸಿದ್ದಿ ಬುಡಕಟ್ಟು, ತುಮಕೂರಿನಿಂದ ಶಿವಕುಮಾರ ಸ್ವಾಮೀಜಿ, ಚಾಮರಾಜನಗರ ಜಿಲ್ಲೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಮಂಡ್ಯದಿಂದ ಕೃಷ್ಣರಾಜಸಾಗರ ಅಣೆಕಟ್ಟು ಬಿಂಬಿಸುವ ಸ್ತಬ್ಧ ಚಿತ್ರಗಳು ಮೆರಣಿಗೆಯಲ್ಲಿ ಪ್ರದರ್ಶನಗೊಳ್ಳಲಿವೆ.
ವಿಜಾಪುರ ದಿಂದ ಗೋಲ್ ಗುಂಬಜ್, ಗದಗ್ ನಿಂದ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಮರದ ಮರು ಬಿತ್ತನೆ, ಬೀದರ್ ಜಿಲ್ಲೆಯಿಂದ ಬಸವಣ್ಣ ನವರ ಅನುಭವ ಮಂಟಪ, ರಾಯಚೂರಿನಿಂದ ಶಾಖೋತ್ಪನ್ನ ವಿದ್ಯುತ್ ಘಟಕ ಬಳ್ಳಾರಿಯಿಂದ ತುಂಗಭದ್ರಾ ಅಣೆಕಟ್ಟು, ಬೆಳಗಾವಿಯಿಂದ ಕಿತ್ತೂರು ರಾಣಿ ಚೆನ್ನಮ್ಮನ ಸ್ವಾತಂತ್ರ್ಯ ಸಂಗ್ರಾಮ, ಬಾಗಲಕೋಟೆಯಿಂದ ಪಟ್ಟದಕಲ್ಲು ಹಾಗೂ ಕೂಡಲ ಸಂಗಮ, ಬೆಂಗಳೂರು ಗ್ರಾಮಾಂತರದಿಂದ ದೇವನಹಳ್ಳಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಬಿಂಬಿಸುವ ಸ್ತಬ್ಧ ಚಿತ್ರಗಳು ಮೆರಣಿಗೆಯಲ್ಲಿ ಪ್ರದರ್ಶನಗೊಳ್ಳಲಿವೆ.
ಬೆಂಗಳೂರು ನಗರ ತ್ಯಾಜ್ಯ ವಿಲೇವಾರಿ ನಂತರದ ಸ್ವಚ್ಛತೆ, ಚಿಕ್ಕಮಗಳೂರಿನಿಂದ ಭೂತಾಯಿ ಕಾಫಿ ಕನ್ಯೆ, ಕಲಬುರ್ಗಿಯಿಂದ ನೂತನ ವಿಮಾನ ನಗರಿ, ದಾವಣಗೆರೆಯಿಂದ ಸ್ಮಾರ್ಟ್ ಸಿಟಿ ಹಾಗೂ ಗ್ಲಾಸ್ ಹೌಸ್, ಯಾದಗಿರಿಯಿಂದ ಬಂಜಾರ ಸಂಸ್ಕೃತಿ ಅನಾವರಣ, ಕೋಲಾರದಿಂದ ಗ್ರಾಮೀಣದೆಡೆಗೆ ಎಲ್ಲರ ನಡೆ, ಚಿತ್ರದುರ್ಗದಿಂದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನ, ಶ್ರೀರಾಮ ದೇವರ ಬೆಟ್ಟ ಒಳಗೊಂಡ ಕೆಂಪೇಗೌಡ, ಕೊಪ್ಪಳ ಕನಕ ಚಲಪತಿ, ಮಂಗಳೂರಿನಿಂದ ಕಡಲ ದೇವರ ಸವಾರಿ, ಚಿಕ್ಕಬಳ್ಳಾಪುರದಿಂದ ವಿದುರಾಶ್ವಥ ಪುಣ್ಯಕ್ಷೇತ್ರ, ದಕ್ಷಿಣ ಕನ್ನಡ ಕೋಟೆ ಚೆನ್ನಯ್ಯ, ತುಳುನಾಡ ವೀರರು, ಹಾಸನದಿಂದ ಹೊಯ್ಸಳ ನಾಡಿನ ಬೇಲೂರು ಶಿಲ್ಪ ಕಲೆಗಳ 900ರ ಸಂಭ್ರಮ, ಉತ್ತರ ಕನ್ನಡ ಸಿದ್ದಿ ಜನಾಂಗ ಹಾಗೂ ಪ್ರವಾಸಿತಾಣ ಯಾನ, ಕೊಡಗಿನಿಂದ ಪ್ರವಾಸೋದ್ಯಮ ಬಿಂಬಿಸುವ ಸ್ತಬ್ಧ ಚಿತ್ರಗಳು ಮೆರಣಿಗೆಯಲ್ಲಿ ಪ್ರದರ್ಶನಗೊಳ್ಳಲಿವೆ.
ಪ್ರತಿ ವರ್ಷದಂತೆ ಜಂಬೂಸವಾರಿ ವೀಕ್ಷಣೆಗೆ ಕೆಲ ಷರತ್ತುಗಳನ್ನು ವಿಧಿಸಿದ್ದು, ಶಿಥಿಲಾವಸ್ಥೆ ಕಟ್ಟಡದ ಮೇಲೆ ನಿಲ್ಲದಂತೆ ಜನರಿಗೆ ಪಾಲಿಕೆ ಆದೇಶ ಹೊರಡಿಸಿದೆ. ಸಯ್ಯಾಜಿರಾವ್ ರಸ್ತೆ ಮೂಲಕ ಸಾಗುವ ಜಂಬೂ ಸವಾರಿಯನ್ನು ಪುರಾತನ ಕಟ್ಟಡದ ಮೇಲೆ ಕುಳಿತು ಜನರು ವೀಕ್ಷಿಸುತ್ತಾರೆ. ಈ ವೇಳೆ ಕಟ್ಟಡ ಅಥವಾ ಮೇಲ್ಛಾವಣಿ ಕುಸಿಯುವ ಆತಂಕದ ಹಿನ್ನಲೆಯಲ್ಲಿ ಶಿಥಿಲಾವಸ್ಥೆ ಕಟ್ಟಡದ ಮೇಲೆ ನಿಲ್ಲದಂತೆ ಆದೇಶ ನೀಡಲಾಗಿದೆ.
ಈ ಬಾರಿ ಭದ್ರತೆ ಹಿನ್ನೆಲೆಯಲ್ಲಿ ಜಂಬೂಸವಾರಿ ಸಾಗುವ ಮಾರ್ಗದುದ್ದಕ್ಕೂ ಡ್ರೋಣ್ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 5 ಸಾವಿರಕ್ಕೂ ಹೆಚ್ಚು ಪೆÇಲೀಸರನ್ನು ನಿಯೋಜಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಕೂಡ ಸಜ್ಜಾಗಿವೆ.
ಸಂಜೆ ಬನ್ನಿಮಂಟಪದಲ್ಲಿ ಅತ್ಯಂತ ಆಕರ್ಷಣೆಯ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಅವರು ಕವಾಯತು ಗೌರವ ವಂದನೆ ಸ್ವೀಕರಿಸುವರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸೇರಿದಂತೆ ಸಚಿವರು, ಶಾಸಕರು, ಸಂಸದರು ಹಾಗೂ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
Mysore Dasara,jambu savari,banni mantapa