ಬೆಂಗಳೂರು,ಅ.17- ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕದಲ್ಲಿ ವಿಶ್ವವನ್ನೇ ಮೀರಿಸುವಂತಹ ದೊಡ್ಡ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಅವರ ಪ್ರತಿಮೆ ನಿರ್ಮಾಣಕ್ಕೆ ಪ್ರಪಂಚದ ಅದ್ಭುತ ಶಿಲ್ಪಿಗಳ ತಂಡವನ್ನೇ ಕರೆಸಬೇಕು.ಗಾಂಧೀಜಿಯವರ ಪ್ರತಿಮೆ ಪ್ರಪಂಚದಲ್ಲಿ ದೊಡ್ಡ ಪ್ರತಿಮೆಯಾಗಬೇಕೆಂದು ಆಗ್ರಹಿಸಿದರು.
ಈ ಪ್ರತಿಮೆಯು ಸಮುದ್ರದ ಪಕ್ಕದಲ್ಲೇ ನಿರ್ಮಾಣವಾದರೆ ಒಳ್ಳೆಯದು.ಯಾಕೆಂದರೆ ಅಲ್ಲಿಗೆ ಕೋಟಿ ಕೋಟಿ ಪ್ರವಾಸಿಗರು ಭಾರತ ದೇಶಕ್ಕೆ ಬರುವುದರಿಂದ ಇದು ದೊಡ್ಡ ಪ್ರವಾಸಿ ಕೇಂದ್ರವಾಗಬೇಕೆಂದರು.
ಕನಿಷ್ಟ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪ್ರತಿಮೆಯಾಗಬೇಕು.ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ದೊಡ್ಡ ಮ್ಯೂಸಿಯಂ ನಿರ್ಮಾಣವಾಗಬೇಕು. ಈ ಮ್ಯೂಸಿಯಂ ಪ್ರಪಂಚದಲ್ಲೇ ಬೃಹತ್ ಮ್ಯೂಸಿಯಂ ಆಗಬೇಕು. ಈ ಮ್ಯೂಸಿಯಂ ಕರ್ನಾಟಕದಲ್ಲೇ ಸ್ಥಾಪನೆಯಾದರೆ ಒಳ್ಳೆಯದು ಎಂದರು.