ಬೆಂಗಳೂರು,ಅ.17-ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣರಾದ ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ವಿರುದ್ಧ ಹೊರಡಿಸಲಾಗಿದ್ದ ಅಮಾನತು ಆದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಿಂಪಡೆದಿದ್ದಾರೆ.
ಮೇ ತಿಂಗಳಿನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಪಕ್ಷದಿಂದ ಅಮಾನತುಗೊಂಡಿದ್ದ ಸಂಗಮೇಶ್ ನಿರಾಣಿ ಮತ್ತೆ ಬಿಜೆಪಿ ತೆಕ್ಕೆಗೆ ಸೇರಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ವಿರುದ್ಧ ಮತ್ತೆ ಕಣಕ್ಕಿಳಿಯದೇ ಬೆಂಬಲ ನೀಡಲು ಸಮ್ಮತಿಸಿದ ಕಾರಣಕ್ಕೆ ನಿರಾಣಿ ವಿರುದ್ಧ ಹೊರಡಿಸಲಾಗಿದ್ದ ಅಮಾನತು ಆದೇಶವನ್ನು ಯಡಿಯೂರಪ್ಪ ಹಿಂಪಡೆದಿದ್ದಾರೆ.
ಟಿಕೆಟ್ ಸಿಗಲಿಲ್ಲ ಎಂದು ಜಮಖಂಡಿಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದ ಸಂಗಮೇಶ್ ನಿರಾಣಿ ಬಿಜೆಪಿ ಮತಗಳನ್ನು ಸೆಳೆದ ಪರಿಣಾಮ ಅಲ್ಪ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದರು.
ಇದೀಗ ಮತ್ತೆ ಅಂಥ ಸನ್ನಿವೇಶ ಬಾರದಿರಲಿ ಎಂಬ ಕಾರಣಕ್ಕೆ ರೆಬಲ್ ನಾಯಕರನ್ನೆಲ್ಲಾ ಮನವೊಲಿಸಿ ಒಮ್ಮತದ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಅದರ ಪರಿಣಾಮ ಸಂಗಮೇಶ್ ನಿರಾಣಿಗೆ ಪಕ್ಷಕ್ಕೆ ರೀ ಎಂಟ್ರಿ ಕೊಡಲು ಅವಕಾಶ ಮಾಡಿಕೊಡಲಾಗಿದೆ.