ಸರಣಿ ರಜೆ ಹಿನ್ನಲೆ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

ಬೆಂಗಳೂರು, ಅ.17-ನಾಳೆಯಿಂದ ಸರಣಿ ರಜೆ ಇರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಬಹುತೇಕ ಬಸ್‍ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.

ವಿವಿಧ ನಗರ ಪಟ್ಟಣದ ನಡುವೆ ಸಂಚರಿಸುವ ಕೆಎಸ್‍ಆರ್‍ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ಸಂಸ್ಥೆಗಳ ದೈನಂದಿನ ಬಸ್‍ಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಮುಂಗಡ ಕಾಯ್ದಿರಿಸುವ ಪ್ರಯಾಣಿಕರ ಟಿಕೆಟ್‍ಗಳು ಈಗಾಗಲೇ ಮುಗಿದು ಹೋಗಿವೆ. ತುರ್ತಾಗಿ ಪ್ರಯಾಣಿಸುವವರು ಹೆಚ್ಚುವರಿ ಬಸ್‍ಗಳಲ್ಲಿ ಪ್ರಯಾಣಿಸಬೇಕಾಗುತ್ತದೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.

ನಿರಂತರ ರಜೆ ಇರುವುದರಿಂದ ಪ್ರವಾಸಿ ತಾಣ ಮತ್ತು ಯಾತ್ರಾ ಸ್ಥಳಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಎಸ್‍ಆರ್‍ಟಿಸಿ ಎರಡೂವರೆ ಸಾವಿರಕ್ಕೂ ಹೆಚ್ಚು ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಿದೆ.

ಇಂದಿನಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‍ಗಳನ್ನು ಒದಗಿಸಲಾಗಿದೆ.ನಾಳೆ ಆಯುಧಪೂಜೆ, ಶುಕ್ರವಾರ ವಿಜಯದಶಮಿ ಅಂಗವಾಗಿ ಸರ್ಕಾರಿ ರಜೆ ಇದೆ.ಶನಿವಾರ ಸಾಂದರ್ಭಿಕ ಹಾಗೂ ವೈಯಕ್ತಿಕ ರಜೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.ಭಾನುವಾರ ಯಥಾರೀತಿ ಸಾರ್ವತ್ರಿಕ ರಜೆ ಇದೆ.ಈ ನಾಲ್ಕೂ ದಿನಗಳ ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರ ಸಂಖ್ಯೆ ಹೆಚ್ಚಿರುತ್ತದೆ.

ದಸರಾ ಹಾಗೂ ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಒದಗಿಸಿದೆ.ಇಂದಿನಿಂದ ಅ.22ರವರೆಗೂ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಕೊಲ್ಲೂರು, ಗೋಕರ್ಣ, ಹೊಸಪೇಟೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ವಿಜಯಪುರ, ಪಣಜಿ, ಹೈದರಾಬಾದ್, ಶಿರಡಿ, ಮಧುರೆ, ತಿರುಪತಿ, ತಿರುಚನಾಪಳ್ಳಿ, ಸೇಲಂ ಸೇರಿದಂತೆ ವಿವಿಧೆಡೆಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಮೈಸೂರು ದಸರಾ ಅಂಗವಾಗಿ 300 ವಿಶೇಷ ಬಸ್‍ಗಳನ್ನು ಒದಗಿಸಲಾಗಿದೆ.ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ 150ಕ್ಕೂ ಹೆಚ್ಚು ಬಸ್‍ಗಳ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಸೂರಿನ ಸುತ್ತಮುತ್ತಲ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಖಾಸಗಿ ಬಸ್‍ಗಳ ದರವೂ ಏರಿಕೆಯಾಗಿ ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟತೊಡಗಿದೆ.
ಸರಣಿ ರಜೆಗಳು ಇದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿರುತ್ತದೆ.ಇದರ ಲಾಭ ಪಡೆದು ಖಾಸಗಿ ಬಸ್‍ಗಳ ದರವನ್ನು ಏರಿಸಲಾಗುತ್ತದೆ ಎಂಬ ಆರೋಪ ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿದೆ.

ನಿರಂತರ ರಜೆ ಸಂದರ್ಭದಲ್ಲಿ ಸಾರ್ವಜನಿಕರಿಗಾಗುವ ತೊಂದರೆ ತಪ್ಪಿಸುವ ಉದ್ದೇಶದಿಂದ 2ನೇ ಶನಿವಾರದ ರಜೆ ರದ್ದುಗೊಳಿಸಿ 3ನೇ ಶನಿವಾರ ರಜೆ ನೀಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿತ್ತು.ಆದರೆ ಕೊನೆ ಘಳಿಗೆಯಲ್ಲಿ ಕೈಬಿಟ್ಟು ಯಥಾರೀತಿ ಎರಡನೇ ಶನಿವಾರದ ರಜೆಯನ್ನು ಮುಂದುವರೆಸಲಾಯಿತು.

3ನೇ ಶನಿವಾರ ರಜೆ ಇಲ್ಲದಿದ್ದರೂ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿರುತ್ತದೆ.ಏಕೆಂದರೆ ಬಹುತೇಕ ಸರ್ಕಾರಿ ನೌಕರರು ಸಾಂದರ್ಭಿಕ ರಜೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ