ಬೆಂಗಳೂರು, ಅ.17-ಆಡಳಿತ ಮತ್ತು ಪ್ರತಿಪಕ್ಷಗ ುವೆ ಜಿದ್ದಾಜಿದ್ದಿನ ಕಣವಾಗಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಪ್ರಮುಖ ಪಕ್ಷಗಳು ಕುರುಡು ಕಾಂಚಾಣವನ್ನೇ ಹರಿಸಲಿವೆ.
ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್‍ಗೆ ದೋಸ್ತಿ ಸರ್ಕಾರ ಐದು ಕ್ಷೇತ್ರಗಳಲ್ಲಿ ಗೆದ್ದು ಪ್ರತಿಪಕ್ಷ ಬಿಜೆಪಿಗೆ ಟಕ್ಕರ್ ನೀಡುವ ಲೆಕ್ಕಾಚಾರದಲ್ಲಿವೆ. ಪ್ರಾರಂಭದ ದಿನದಿಂದಲೂ ಇದೊಂದು ಅವಕಾಶವಾದಿತನ ಮೈತ್ರಿ ಎಂದು ಹೀಗಳೆಯುತ್ತಿರುವ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ.
ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಿಗೆ ಅಷ್ಟೇನೂ ಮುತುವರ್ಜಿ ವಹಿಸದ ಕಮಲ ಪಡೆ ಶಿವಮೊಗ್ಗ, ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಹೀಗೆ ಪ್ರಮುಖ ಮೂರೂ ಪಕ್ಷಗಳು ಉಪಕದನದಲ್ಲಿ ಗೆಲುವಿಗೆ ನಾನಾ ಕಸರತ್ತು ನಡೆಸುತ್ತಿರುವುದರಿಂದ ನಿಸ್ಸಂದೇಹವಾಗಿ ಝಣಝಣ ಲಕ್ಷ್ಮೀ ನೀರಿನಂತೆ ಹರಿಯಲಿದೆ.
ಹೈವೋಲ್ಟೇಜ್ ಕ್ಷೇತ್ರವಾಗಿರುವ ಗಣಿ ಜಿಲ್ಲೆ ಬಳ್ಳಾರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಇಡೀ ಕಾಂಗ್ರೆಸ್ ನಾಯಕರು ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇಡೀ ಸಚಿವ ಸಂಪುಟದ ಸಚಿವರು, ಶಾಸಕರನ್ನು ಬ್ಲಾಕ್ ಹಂತದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಒಬ್ಬೊಬ್ಬರಿಗೆ ಒಂದೊಂದು ಕ್ಷೇತ್ರವನ್ನು ನೀಡಲಾಗಿದೆ.
ಜಾತಿ, ಸಮುದಾಯ, ಆಧಾರ ಮೇಲೆಯೇ ಉಸ್ತುವಾರಿಗಳನ್ನು ನೇಮಿಸಿರುವ ಕಾಂಗ್ರೆಸ್ ಚುನಾವಣಾ ಕಾವನ್ನು ಹೆಚ್ಚಿಸಿದೆ. ಇತ್ತ ಬಿಜೆಪಿ ಕೂಡ ಕಾಂಗ್ರೆಸ್ ಸೆಡ್ಡು ಹೊಡೆಯುವ ರೀತಿಯಲ್ಲಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ.ತನಗಿರುವ ಸಂಘಟನಾ ಸಾಮಥ್ರ್ಯ, ಸಂಘ ಪರಿವಾರದ ಕಾರ್ಯಕರ್ತರು ಸೇರಿದಂತೆ ವಿವಿಧ ಮೂಲಗಳಿಂದ ಗೆಲ್ಲಲು ರಣತಂತ್ರ ರೂಪಿಸಿದೆ.
ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಬಿಜೆಪಿ-ಜೆಡಿಎಸ್ ಗಂಭೀರವಾಗಿಯೇ ತೆಗೆದುಕೊಂಡಿದೆ.ಪ್ರತಿಪಕ್ಷದ ನಾಯಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಸ್ಪರ್ಧಿಸಿದ್ದಾರೆ.ಇವರಿಗೆ ಪ್ರತಿಸ್ಪರ್ಧಿಯಾಗಿ ಜೆಡಿಎಸ್‍ನಿಂದ ಮಧುಬಂಗಾರಪ್ಪ ಕಣಕ್ಕಿಳಿದಿದ್ದಾರೆ.
ಹೀಗೆ ಪ್ರತಿಷ್ಠಿತರ ಪುತ್ರರತ್ನರೇ ಸ್ಪರ್ಧೆಯಲ್ಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಜಿದ್ದಾಜಿದ್ದು ಏರ್ಪಟ್ಟಿದೆ.ಮತದಾರರನ್ನು ಓಲೈಸಿಕೊಳ್ಳಲು ನಾನಾ ರೀತಿಯ ತಂತ್ರಗಳನ್ನು ಅನುಸರಿಸಲಾಗುತ್ತಿದೆ.
ಮಾಜಿ ಸಚಿವ ಸಿದ್ದು ನ್ಯಾಮೇಗೌಡ ನಿಧನದಿಂದ ತೆರವಾಗಿರುವ ಜಮಖಂಡಿ ಕ್ಷೇತ್ರದಲ್ಲೂ ಕಾಂಗ್ರೆಸ್-ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಎದುರಾಗಿದೆ.ಕ್ಷೇತ್ರವನ್ನು ಉಳಿಸಿಕೊಳ್ಳಲು ಕೈ ಪಡೆ ಸನ್ನದ್ಧವಾಗಿದ್ದರೆ, ಕಳೆದುಕೊಂಡಿರುವ ಕ್ಷೇತ್ರವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ಕೂಡ ಸಜ್ಜಾಗಿದೆ.ಹೀಗೆ ಉಪಸಮರದಲ್ಲಿ ಈ ಬಾರಿ ಕುರುಡು ಕಾಂಚಾಣದ ಸದ್ದು ಜೋರಾಗುವ ಲಕ್ಷಣಗಳು ಗೋಚರಿಸಿವೆ.