ಬೆಂಗಳೂರು, ಅ.16- ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ಬೂದಕುಂಬಳಕಾಯಿ, ಹಣ್ಣು, ಹೂವು, ಮಾವಿನ ಸೊಪ್ಪು ಮಾರಾಟ ಮಾಡುವವರು ನಗರದೆಲ್ಲೆಡೆ ವ್ಯಾಪಾರ ಪ್ರಾರಂಭಿಸಿದ್ದಾರೆ.
ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಮಾಗಡಿ, ಯಶವಂತಪುರ ಮಾರುಕಟ್ಟೆಗಳಲ್ಲದೆ ಬಹುತೇಕ ಪ್ರಮುಖ ರಸ್ತೆಗಳ ಎರಡೂ ಬದಿಗಳ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರಸ್ಥರು ಈಗಾಗಲೇ ವ್ಯಾಪಾರ ಶುರುವಿಟ್ಟುಕೊಂಡಿದ್ದಾರೆ.
ಎಲ್ಲೆಲ್ಲೂ ಬೂದಕುಂಬಳಕಾಯಿ ರಾಶಿ ರಾಶಿ ಎದ್ದು ಕಾಣುತ್ತಿದೆ. ಬಾಳೆ ಕಂದು, ಮಾವಿನ ಸೊಪ್ಪು, ಚೆಂಡು ಹೂವಿನ ರಾಶಿ ಕಾಣುತ್ತಿದೆ. ಅಲ್ಲದೆ, ರಸ್ತೆ ಬದಿಯ ಖಾಲಿ ಜಾಗದಲ್ಲಿ ಟೆಂಟ್ ಹಾಕಿಕೊಂಡು ಸಿಹಿ ತಿಂಡಿ, ಕಡ್ಲೆಪುರಿಗಳನ್ನು ಮಾರಲಾಗುತ್ತಿದೆ.
ಗುರುವಾರ ಮತ್ತು ಶುಕ್ರವಾರ ಎರಡು ದಿನ ಸರ್ಕಾರಿ ರಜೆ ಇರುವುದರಿಂದ ಇಂದಿನಿಂದಲೇ ಹಣ್ಣು, ಹೂವು, ಸಿಹಿ ಕೊಂಡು ನಾಳೆಯೇ ಪೂಜೆಗೆ ಸಿದ್ದತೆಗಳು ನಡೆಯುತ್ತಿವೆ.
ಹೋಟೆಲ್, ಬೇಕರಿಗಳ ಮುಂದೆ ಪೆಂಡಾಲ್ ಹಾಕಿಕೊಂಡು ಸಿಹಿ ಹಾಗೂ ಖಾರದ ಖಾದ್ಯಗಳ ಪುಟ್ಟ ಪುಟ್ಟ ಬಾಕ್ಸ್ಗಳನ್ನು ಮಾಡಿ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಇನ್ನು ಸೇಬು, ಮೋಸಂಬಿ, ಕಿತ್ತಳೆ ಹಣ್ಣುಗಳ ಬೆಲೆ ಕೊಂಚ ಕಡಿಮೆ ಇರುವುದರಿಂದ ತಳ್ಳೋ ಗಾಡಿಗಳ ವ್ಯಾಪಾರಸ್ಥರು ಗ್ರಾಹಕರನ್ನು ಕೂಗಿ ಕೂಗಿ ವ್ಯಾಪಾರ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.