ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಬಲರಾಮನ ಪಯಣ ಹಾಗೂ ನೈಜ ಕಥೆ ಕುರಿತ ಬಲರಾಮನ ಕಥೆ ಪುಸ್ತಕ ಅನಾವರಣ

ಬೆಂಗಳೂರು, .16-ತಾವು ಹಾಗೂ ಅಲ್ಲಾಡಿ ಜಯಶ್ರೀ ಅವರು ರಚಿಸಿರುವ ಬಲರಾಮನ ಕಥೆ ಎಂಬ ಪುಸ್ತಕವನ್ನು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅನಾವರಣಗೊಳಿಸಲಾಗಿದೆ ಎಂದು ಲೇಖಕ ಡಿ.ಕೆ.ಭಾಸ್ಕರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಇನ್ಫೋಸಿಸ್‍ನ ಮುಖ್ಯಸ್ಥರಾದ ಸುಧಾಮೂರ್ತಿ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಸಂದರ್ಭದಲ್ಲೇ ಈ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಬಲರಾಮನ ಪಯಣ ಹಾಗೂ ಜೀವಿಸಿರುವ ಆನೆಯ ನೈಜ ಕಥೆಯನ್ನು ಈ ಪುಸ್ತಕದಲ್ಲಿ ಅಳವಡಿಸಲಾಗಿದೆ ಎಂದರು.

ಈ ಪುಸ್ತಕವು ಆನೆಯ ಅಗಾಧ ಜಗತ್ತನ್ನು ಪ್ರತಿಪಾದಿಸುವ ಪುಟ್ಟ ಪ್ರಯತ್ನವಾಗಿದೆ. ಅವುಗಳ ಜೀವನ ವಿಧಾನವನ್ನು ಅರಿಯುವ, ಪರಸ್ಪರ ಪ್ರೀತಿಸುವ, ಆತ್ಮೀಯ ಸಂಗಾತಿಯನ್ನು ಕಳೆದುಕೊಂಡಾಗ ಅವುಗಳು ರೋದಿಸುವ ಪರಿಯನ್ನು ಈ ಪುಸ್ತಕದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಬಲರಾಮನು ಮೈಸೂರು ಅರಮನೆಗೆ ಬಂದಿದ್ದು ಯಾವ ರೀತಿ ಎಂಬುದು ಈ ಪುಸ್ತಕದಲ್ಲಿ ಅಡಕವಾಗಿದೆ ಎಂದು ತಿಳಿಸಿದರು.
ಪತ್ರಕರ್ತೆಯಾಗಿರುವ ಅಲ್ಲಾಡಿ ಜಯಶ್ರೀ ಅವರು, ನಗರದ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿದವರಾಗಿದ್ದು, ಸದ್ಯಕ್ಕೆ ಅಮೆರಿಕಾದಲ್ಲಿ ನೆಲೆಸಿದ್ದಾರೆ. ನ್ಯಾಷನಲ್ ಫೌಂಡೇಶನ್ ಫಾರ್ ಇಂಡಿಯಾದ ಮಾಧ್ಯಮ ಫೆಲೋಶಿಪ್ ಪಡೆದುಕೊಂಡಿದ್ದ ಜಯಶ್ರೀ ಅವರು ಕರ್ನಾಟಕದಲ್ಲಿನ ಯಶಸ್ವಿ ಉದ್ಯಮಿಗಳ ಕುರಿತು ಸರಣಿ ಲೇಖನಗಳನ್ನು ಬರೆದಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ