ಬಿಜೆಪಿ ಚುನಾವಣಾ ಉಸ್ತುವಾರಿಗಳ ನೇಮಕ

ಬೆಂಗಳೂರು, ಅ.16- ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದ್ದು, ಮುಖಂಡರಾದ ಈಶ್ವರಪ್ಪ, ರಮೇಶ್ ಜಿಗಜಿಣಗಿ, ಅಶೋಕ್, ಜಗದೀಶ್ ಶೆಟ್ಟರ್, ಸದಾನಂದಗೌಡ ಅವರುಗಳು ಇದೀಗ ತಮ್ಮ ಸಾಮಥ್ರ್ಯ ಸಾಬೀತುಪಡಿಸುವ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದಾರೆ.

ಐದು ಕ್ಷೇತ್ರಗಳಿಗೂ ಬಿಜೆಪಿ, ಚುನಾವಣಾ ಉಸ್ತುವಾರಿಗಳನ್ನು ನೇಮಿಸಿ ಜವಾಬ್ದಾರಿ ಹಂಚಿಕೆ ಮಾಡಿದೆ. ಶಿವಮೊಗ್ಗದಲ್ಲಿ ಈಶ್ವರಪ್ಪ ನೇತೃತ್ವದ ಸಮಿತಿ ರಚಿಸಿದ್ದು, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಶಿವಕುಮಾರ್ ಉದಾಸಿ, ಪಿ.ರಾಜೀವ್, ಸುನೀಲ್ ಕುಮಾರ್, ಮಾಜಿ ಸಚಿವ ಜೀವರಾಜ್ ಅವರನ್ನು ಸದಸ್ಯರನ್ನಾಗಿ ನೇಮಿಸಿದೆ. ಬಳ್ಳಾರಿ ಕ್ಷೇತ್ರಕ್ಕೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ನೇತೃತ್ವದ ಸಮಿತಿ ರಚಿಸಿದ್ದು, ಮಾಜಿ ಸಚಿವರಾದ ಶ್ರೀರಾಮುಲು, ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಎನ್. ರವಿಕುಮಾರ್, ಪ್ರಭು ಚೌಹಾಣ್, ರಾಮಣ್ಣ ಲಮಾಣಿ ಅವರನ್ನು ಸದಸ್ಯರನ್ನಾಗಿ ನೇಮಿಸಿದೆ. ಮಂಡ್ಯ ಕ್ಷೇತ್ರಕ್ಕೆ ಮಾಜಿ ಡಿಸಿಎಂ ಆರ್. ಅಶೋಕ್ ಅವರ ನೇತೃತ್ವದ ಸಮಿತಿ ರಚಿಸಿದ್ದು, ಸಂಸದ ಪ್ರತಾಪ ಸಿಂಹ, ನಾಗೇಂದ್ರ , ಡಿ.ಎಸ್. ವೀರಯ್ಯ ಅವರನ್ನು ಉಸ್ತುವಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿದೆ.

ಇವರೊಂದಿಗೆ ಜಮಖಂಡಿ ಕ್ಷೇತ್ರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ಸಮಿತಿ ರಚಿಸಿದ್ದು, ಪ್ರಭಾಕರ್ ಕೋರೆ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಗದ್ದಿ ಗೌಡರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ರಾಮನಗರ ಕ್ಷೇತ್ರಕ್ಕೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರ ನೇತೃತ್ವದ ಸಮಿತಿ ರಚಿಸಿದ್ದು, ಮುನಿರಾಜು ಗೌಡ, ಸಿ.ಪಿ.ಯೋಗೇಶ್ವರ್, ಎ.ನಾರಾಯಣಸ್ವಾಮಿ ಅವರನ್ನು ಉಸ್ತುವಾರಿ ಸಮಿತಿಯ ಸದಸ್ಯರಾಗಿ ನೇಮಿಸಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಕಣಕ್ಕಿಳಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನೇ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ಆಯ್ಕೆ ಮಾಡಿ ಪಕ್ಷದೊಳಗೆ ತಲೆದೂರಬಹುದಾಗಿದ್ದ ಆಂತರಿಕ ಕಲಹಕ್ಕೆ ಬ್ರೇಕ್ ಹಾಕಿದ್ದಾರೆ. ಸ್ವತಃ ಈಶ್ವರಪ್ಪ ಉಸ್ತುವಾರಿ ತೆಗೆದುಕೊಂಡಿರುವ ಕಾರಣ ರೆಬಲ್ ಬಣ ಅನಿವಾರ್ಯವಾಗಿ ಮೌನಕ್ಕೆ ಶರಣಾಗಿದ್ದು ಇದೀಗ ಈಶ್ವರಪ್ಪ ಅವರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಕಳೆದ ಬಾರಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ತಮ್ಮ ಸಾಮಥ್ರ್ಯವನ್ನು ಸಾಬೀತು ಪಡಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಬಳ್ಳಾರಿಯಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಸವಾಲು ಬಿಜೆಪಿಗೆ ಎದುರಾಗಿದ್ದು ಸಮ್ಮಿಶ್ರ ಸರ್ಕಾರದ ಒಮ್ಮತದ ಅಭ್ಯರ್ಥಿಯನ್ನು ಸೋಲಿಸಬೇಕಿದೆ, ಇದಕ್ಕಾಗಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ನೇತೃತ್ವದ ಚುನಾವಣಾ ಉಸ್ತುವಾರಿ ಸಮಿತಿ ರಚಿಸಿದ್ದರೂ ಜವಾಬ್ದಾರಿ ವಾಸ್ತವವಾಗಿ ಶ್ರೀರಾಮುಲು ಮೇಲಿದೆ. ರೆಡ್ಡಿ ಸಹೋದರರ ಜೊತೆಗೂಡಿ ಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿದ್ದು ಕ್ಷೇತ್ರ ಉಳಿಸಿಕೊಂಡು ಬಳ್ಳಾರಿಯಲ್ಲಿ ತಮ್ಮ ಪ್ರಾಬಲ್ಯ ಕಡಿಮೆಯಾಗಿಲ್ಲ ಎನ್ನುವ ಸಂದೇಶವನ್ನು ರವಾನಿಸಬೇಕಿದೆ.

ಇನ್ನು ಮಂಡ್ಯದಲ್ಲಿ ಪಕ್ಷಕ್ಕೆ ಸರಿಯಾದ ನೆಲೆ ಇಲ್ಲ. ಅಭ್ಯರ್ಥಿ ಗೆಲುವು ಸಾಧಿಸದೇ ಇದ್ದರೂ ಪಕ್ಷವನ್ನು ಇಲ್ಲಿ ತಳವೂರುವಂತೆ ಮಾಡುವ ಹಾಗೂ ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಗಳಿಸಿ ಮುಂಬರಲಿರುವ ಸಾರ್ವಜನಿಕ ಚುನಾವಣೆಯಲ್ಲಿ ಪಕ್ಷಕ್ಕೆ ನೆಲೆ ಕಲ್ಪಿಸುವ ಮೂಲಕ ಬಿಬಿಎಂಪಿ ಚುನಾವಣಾ ಮುಖಭಂಗದಿಂದ ಹೊರಬಂದು ಸಾಮಥ್ರ್ಯ ಸಾಬೀತುಪಡಿಸಿ ಸಮರ್ಥ ನಾಯಕ ಎಂದು ಹೈಕಮಾಂಡ್‍ಗೆ ಸಂದೇಶ ರವಾನಿಸಬೇಕಿದೆ.

ಇವರ ಜೊತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‍ಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಜಮಖಂಡಿಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಉತ್ತರ ಕರ್ನಾಟಕದಲ್ಲಿ ತಮ್ಮ ಪ್ರಭಾವವಿದೆ ಎನ್ನುವ ಸಂದೇಶವನ್ನು ರವಾನಿಸಿ ಭವಿಷ್ಯದಲ್ಲಿ ರಾಜ್ಯದ ನಾಯಕತ್ವವನ್ನು ದಕ್ಕಿಸಿಕೊಳ್ಳುವ ಚಿಂತನೆ ಇದೆ. ರಾಮನಗರದಲ್ಲಿ ಬಿಜೆಪಿಗೆ ಅಷ್ಟಾಗಿ ನೆಲೆ ಇಲ್ಲದೇ ಇದ್ದರೂ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಅಭ್ಯರ್ಥಿ ಗೆಲ್ಲಿಸುವ ಮೂಲಕ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಧಾನಸಭಾ ಸೋಲಿನ ವೈಫಲ್ಯವನ್ನು ಮೆಟ್ಟಿ ಮತ್ತೆ ತಮ್ಮ ಅಸ್ತಿತ್ವವನ್ನು , ಪ್ರಭಾವವನ್ನು ಮರಳಿ ಪಡೆಯುವ ಒತ್ತಡಕ್ಕೆ ಸಿಲುಕಿದ್ದಾರೆ.

ಕಾರ್ಯತಂತ್ರವೇನು?
ಶಿವಮೊಗ್ಗ ಬಿಜೆಪಿಯ ಭದ್ರಕೋಟೆ, ಕೇಂದ್ರದ ಸಾಧನೆಗಳು, ಯಡಿಯೂರಪ್ಪ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತ ಯಾಚಿಸಲಿದ್ದಾರೆ. ಬಳ್ಳಾರಿಯಲ್ಲಿ ಮೈತ್ರಿ ಸರ್ಕಾರದಲ್ಲಿನ ಭಿನ್ನಮತ, ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಪ್ರಚಾರ ನಡೆಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಮಂಡ್ಯ, ಜಮಖಂಡಿ, ರಾಮನಗರದಲ್ಲಿ ಮೈತ್ರಿ ಸರ್ಕಾರದಲ್ಲಿನ ಆಂತರಿಕ ಭಿನ್ನಮತದ ವಿಷಯಗಳನ್ನು ಜನರ ಮುಂದಿಟ್ಟು ಮೋದಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿ ಮತ ಯಾಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ