ಬೆಂಗಳೂರು, ಅ.16- ಬಿಬಿಎಂಪಿ ಎಂದರೆ ಅಶಿಸ್ತು, ಅಶಿಸ್ತು ಎಂದರೆ ಬಿಬಿಎಂಪಿ ಎಂಬುದು ವಾಡಿಕೆ ಮಾತಾಗಿದೆ. ಈ ಅಪವಾದದಿಂದ ಹೊರಬರಲು ಪಾಲಿಕೆ ಆಡಳಿತ ಸನ್ನದ್ಧವಾಗಿದೆ.
ಬಿಬಿಎಂಪಿಯಲ್ಲಿ ಶಿಸ್ತು ಜಾರಿಗೆ ತರುವ ಉದ್ದೇಶದಿಂದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ.
ಕಳೆದ ಹಲವಾರು ವರ್ಷಗಳಿಂದ ಬಿಬಿಎಂಪಿಯಲ್ಲಿ ಮಂಡನೆಯಾಗುತ್ತಿರುವ ಬಜೆಟ್ ಅವೈಜ್ಞಾನಿಕವಾಗಿದ್ದು, ಆರ್ಥಿಕ ಶಿಸ್ತು ಇಲ್ಲದಂತಾಗಿದೆ ಎಂಬುದು ಲೆಕ್ಕಪತ್ರ ಪರಿಶೀಲನಾ ವರದಿಯಲ್ಲಿ ಬಹಿರಂಗಗೊಂಡಿದೆ.
ಮಾತ್ರವಲ್ಲ, ಇತ್ತೀಚೆಗೆ ಆಯುಕ್ತರು ರಾಜ್ಯಸರ್ಕಾರಕ್ಕೆ ಪತ್ರ ಬರೆದು ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಸಾರ್ವಜನಿಕರು ಪಾವತಿಸುವ ತೆರಿಗೆ ಹಣ ಪೆÇೀಲಾಗುತ್ತಿರುವುದನ್ನು ಮನಗಂಡು ಇನ್ನು ಮುಂದೆ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು.
ಈ ಕಾಯ್ದೆಯನ್ನು ಬಿಬಿಎಂಪಿ ಹೊರತುಪಡಿಸಿ ಇತರ ಎಲ್ಲ ನಗರಸಭೆ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿತ್ತು.
ಇದೀಗ ಬಿಬಿಎಂಪಿಯನ್ನು ಈ ಮಹತ್ವದ ಕಾಯ್ದೆ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ.