ಘನತ್ಯಾಜ್ಯ ನಿರ್ವಹಣೆ ವಲಯಗಳ ಜಂಟಿ ಆಯುಕ್ತರ ಹೆಗಲಿಗೆ

ಬೆಂಗಳೂರು, ಅ.16- ಪಾಲಿಕೆ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಹೊಣೆ ಇನ್ನು ಮುಂದೆ ಆಯಾ ವಲಯಗಳ ಜಂಟಿ ಆಯುಕ್ತರ ಹೆಗಲಿಗೆ ಬೀಳುವ ಸಾಧ್ಯತೆ ಇದೆ.
ಅಸಮರ್ಪಕ ಕಸ ವಿಲೇವಾರಿಯಿಂದ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಅಸಂಬದ್ಧವಾಗಿದ್ದು, ಇನ್ನು ಮುಂದೆ ಯಾವುದೇ ಸಮಸ್ಯೆ ಉಂಟಾಗದಂತೆ ಪಾಲಿಕೆ ಎಂಟು ವಲಯಗಳ ಜಂಟಿ ಆಯುಕ್ತರು ವಾರಕ್ಕೆರಡು ಬಾರಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ.
ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ತಾಂಡವವಾಡುತ್ತಿದೆ. ಹೀಗಾಗಿಯೇ ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ 210ನೆ ಸ್ಥಾನದಲ್ಲಿದ್ದ ಬೆಂಗಳೂರು 216ನೆ ಸ್ಥಾನಕ್ಕೆ ಬಂದಿದೆ.
2015ರಲ್ಲಿ 11ನೆ ಸ್ಥಾನ, 2016ರಲ್ಲಿ 38ನೆ ಸ್ಥಾನ, 2017ರಲ್ಲಿ 210ನೆ ಸ್ಥಾನದಲ್ಲಿದ್ದ ನಗರ 2018ನೆ ಸಾಲಿನಲ್ಲಿ 216ಕ್ಕೆ ಏರುವ ಮೂಲಕ ಕೆಟ್ಟ ಹೆಸರು ಪಡೆಯುವಂತಾಗಿದೆ.

ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಪ್ರಥಮ ಸ್ಥಾನ ಗಳಿಸಬೇಕು ಎಂದು ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರೂ ಉತ್ತಮ ಶ್ರೇಯಾಂಕ ಪಡೆಯಲು ಸಾಧ್ಯವಾಗದೆ ಕುಸಿತ ಕಾಣುತ್ತಿರುವುದಕ್ಕೆ ಪ್ರಮುಖ ಕಾರಣ ಕಸ ವಿಲೇವಾರಿ.

ಹೀಗಾಗಿ ನಗರವನ್ನು ಕಾಡುತ್ತಿರುವ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂಬ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ.
ಕಸ ವಿಲೇವಾರಿ ನಿರ್ವಹಣೆಯನ್ನು ಎಂಟು ವಲಯಗಳ ಜಂಟಿ ಆಯುಕ್ತರುಗಳಿಗೆ ವಹಿಸಲು ನಿರ್ಧರಿಸಲಾಗಿದ್ದು, ಎಲ್ಲ ಎಂಟು ಆಯುಕ್ತರುಗಳಿಗೆ ವಾರಕ್ಕೆರಡು ಬಾರಿ ಘನತ್ಯಾಜ್ಯ ನಿರ್ವಹಣೆ ಪರಿಶೀಲಿಸುವ ಹೊಣೆ ನೀಡಲಾಗುತ್ತಿದೆ.

ಪರಿಶೀಲನೆ ಸಂದರ್ಭದಲ್ಲಿ ಕಸ ವಿಲೇವಾರಿಯಲ್ಲಿ ಕಂಡುಬರುವ ನ್ಯೂನ್ಯತೆಗಳು ಹಾಗೂ ಪೌರ ಕಾರ್ಮಿಕರ ಸಮಸ್ಯೆಗಳನ್ನು ಗುರುತಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಘನತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ಆಯುಕ್ತರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗುತ್ತಿದೆ.

ಒಟ್ಟಾರೆ ಭವಿಷ್ಯದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಯಾವುದೇ ಲೋಪ ಕಂಡುಬರದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಕಾಲಕಾಲಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆಯೂ ತಾಕೀತು ಮಾಡಲಾಗಿದೆ.

ಆಯುಕ್ತರಿಗೆ ಮನವಿ: ಸ್ವಚ್ಛತೆಯಲ್ಲಿ ನಗರ ಕುಸಿತ ಕಾಣುತ್ತಿರುವುದರಿಂದ ಹಾಗೂ ಭವಿಷ್ಯದಲ್ಲಿ ಸಮರ್ಪಕ ಘನತ್ಯಾಜ್ಯ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಕಸ ವಿಲೇವಾರಿ ನಿರ್ವಹಣೆಯನ್ನು ಆಯಾ ವಲಯಗಳ ಜಂಟಿ ಆಯುಕ್ತರುಗಳಿಗೆ ವಹಿಸಿ ವಾರಕ್ಕೆರಡು ಬಾರಿ ಪರಿಶೀಲನೆ ನಡೆಸಲು ಸೂಚನೆ ನೀಡುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದ್ದಾರೆ.

ಜಂಟಿ ಆಯುಕ್ತರು ನೀಡುವ ವರದಿಯನ್ನಾಧರಿಸಿ ಮಂಜುನಾಥ್ ಪ್ರಸಾದ್ ಅವರು ಸಮಸ್ಯೆ ನಿವಾರಿಸಲು ಆಡಳಿತಾತ್ಮಕ ಕ್ರಮ ಕೈಗೊಳ್ಳುವ ಮೂಲಕ ಭವಿಷ್ಯದಲ್ಲಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವಂತೆಯೂ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ