ಹಾಸನ: ದೇವಿಯ ಕುರಿತಾದ ಪವಾಡ ಬಯಲು ವಿಷಯ, ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ದೇವಾಲಯದ ಹಿರಿಯ ಅರ್ಚಕರೊಬ್ಬರು ಇಲ್ಲಿ ದೇಗುಲದಲ್ಲಿ ಯಾವುದೇ ಪವಾಡ ನಡೆಯುತ್ತಿಲ್ಲ. ಇದೆಲ್ಲಾ ಕೆಲವರ ಕಟ್ಟುಕತೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಇಂದು ಈ ಸಂಗತಿ ಹೊರ ಹಾಕಿದ ಪ್ರಧಾನ ಅರ್ಚಕ ನಾಗರಾಜ್, ಕೆಲವರು ಹಾಸನಾಂಬೆ ದೇವಾಲಯದಲ್ಲಿ ಪವಾಡ ನಡೆಯುತ್ತಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ ನಾವ್ಯಾರೂ, ಪವಾಡ ನಡೆಯುತ್ತಿದೆ ಎಂದು ಎಲ್ಲೂ ಹೇಳಿಲ್ಲ, ಮುಂದೆಯೂ ಹೇಳುವುದಿಲ್ಲ ಇಲ್ಲಿ ಯಾವುದೇ ಪವಾಡ ನಡೆಯುತ್ತಿಲ್ಲ.
ಗರ್ಭಗುಡಿ ಬಾಗಿಲು ಮುಚ್ಚುವಾಗ ಯಾವುದೇ ನೈವೇದ್ಯ ಇಟ್ಟಿರುವುದಿಲ್ಲ ಎಂದು ಹೇಳಿದ್ದಾರೆ. ಬಾಗಿಲು ತೆರೆದ ದಿನ ದೇವಿಯ ಶಾಂತಿಗಾಗಿ ಕಡ್ಲೇ ಬೇಳೆ-ಹೆಸರು ಬೇಳೆ ನೈವೇದ್ಯ ಮಾಡುತ್ತೇವೆ ಅಷ್ಟೆ. ಅದನ್ನು ನಾವೂ ತಿಂದು ಬಂದ ಭಕ್ತರಿಗೂ ಕೊಡುತ್ತೇವೆ. ಇಟ್ಟ ನೈವೇದ್ಯ ಹಳಸಲ್ಲ ಅನ್ನೋದು ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದೆಲ್ಲಾ ಕಪೋಲ ಕಲ್ಪಿತ, ಯಾವುದೇ ಪವಾಡ ನಡೆಯುತ್ತಿಲ್ಲ ಎಂದು ಒತ್ತಿ ಒತ್ತಿ ಹೇಳಿದ ನಾಗರಾಜ್, ಈ ಬಗ್ಗೆ ಯಾರು ಹೇಳುತ್ತಿದ್ದಾರೋ ಅವರಿಗೇ ಪವಾಡ ಅಸಲೀಯತ್ತು ನಡೆಯೋದು ಗೊತ್ತಿರಬೇಕು ಎಂದರು. ಎಲ್ಲವೂ ಅವರವರ ನಂಬಿಕೆ, ಇಲ್ಲಿಗೆ ಬಾರದವರನ್ನು ಬನ್ನಿ ಎಂದು ಬಲವಂತ ಮಾಡೋದಿಲ್ಲ. ಬರುವವರನ್ನು ಬೇಡ ಅನ್ನೋದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರತಿ ವರ್ಷ ದೇವಿಯ ಬಾಗಿಲು ಹಾಕಿದ ನಂತರ ಕೀ ಜಿಲ್ಲಾಡಳಿತದ ಬಳಿ ಇರುತ್ತೆ. ಬಾಗಿಲು ಹಾಕುವಾಗ ನಾವು ದೀಪ ಹಚ್ಚಿರುತ್ತೇವೆ. ಆದರೆ ಮುಂದಿನದಲ್ಲಿ ಹೇಳುವುದಿಲ್ಲ. ಬಾಗಿಲು ತೆರೆದಾಗ ಯಾರಿಗೆ ಏನು ಕಾಣುತ್ತೋ ಅದನ್ನು ನೋಡಬಹುದು ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.