ಚೆನ್ನೈ: ಶ್ರೀರಾಮನ ಜನ್ಮ ಸ್ಥಳದಲ್ಲಿ ಮಂದಿರ ನಿರ್ಮಾಣ ಮಾಡುವುದು ಎಲ್ಲರಿಗೂ ಇಷ್ಟವೇ. ಆದರೆ, ಬೇರೆ ಧರ್ಮೀಯರ ಪೂಜಾ ಸ್ಥಳ ಕೆಡವಿ ಮಂದಿರ ನಿರ್ಮಾಣ ಮಾಡಲು ಒಬ್ಬ ಒಳ್ಳೆಯ ಹಿಂದೂ ಬಯಸುವುದಿಲ್ಲ ಎಂದು ಶಶಿ ತರೂರ್ ಹೇಳಿದರು. “ದಿ ಹಿಂದೂ ಲಿಟ್ ಫಾರ್ ಲೈಫ್ ಡೈಲಾಗ್ 2018” ಸಂವಾದ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡುತ್ತಿದ್ದ ಶಶಿ ತರೂರ್, ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣವನ್ನು ಬಹುತೇಕ ಹಿಂದೂಗಳು ಬಯಸುತ್ತಾರೆಂಬುದನ್ನು ಒಪ್ಪಿಕೊಂಡರು. ಭಾರತದ ಸಮಸ್ಯೆಗಳು ಮತ್ತು ಅವಕಾಶಗಳು ಎಂಬ ವಿಷಯದ ಕುರಿತಾಗಿ ಮಾಜಿ ಪಶ್ಚಿಮ ಬಂಗಾಳ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರ ಜೊತೆ ಸಂವಾದದಲ್ಲಿ ಭಾಗಿಯಾದ ಶಶಿ ತರೂರ್ ಅವರು ಹಿಂದುತ್ವವಾದದಿಂದ ಮುಂಬರಲಿರುವ ಅಪಾಯದ ಬಗ್ಗೆ ಎಚ್ಚರಿಕೆಯನ್ನೂ ನೀಡಿದರು.
“ಮುಂಬರುವ ದಿನಗಳಲ್ಲಿ ಅಪಾಯದ ಘಟನೆಗಳನ್ನು ನಾವು ಎದುರಿಸಬೇಕಾಗಬಹುದು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆ ಸಮೀಪವಾಗುತ್ತಿರುವಂತೆಯೇ ಧಾರ್ಮಿಕ ಭಾವನೆಗಳನ್ನು ಉದ್ರೇಕಿಸುವ ಮತ್ತು ಕೋಮು ಗಲಭೆಗೆ ಪ್ರಚೋದನೆ ಕೊಡುವ ಘಟನೆಗಳು ನಡೆಯುತ್ತಿದ್ದುದನ್ನು ನಾವು ನೋಡುತ್ತಾ ಬಂದಿದ್ಧೇವೆ. ಈ ವಿಷಯ ನನಗೆ ಚಿಂತೆಗೀಡು ಮಾಡಿದೆ,” ಎಂದು ಶಶಿ ತರೂರ್ ಕಳವಳ ವ್ಯಕ್ತಪಡಿಸಿದರು.
ಮೊನ್ನೆ ಚಂದೀಗಢದಲ್ಲಿ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯ ಮೇಳದಲ್ಲೂ ಶಶಿ ತರೂರ್ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಿಸಬೇಕೆಂಬುದು ಹಿಂದೂಗಳ ಇಚ್ಛೆಯಾದರೂ ಬೇರೊಬ್ಬ ಪೂಜಾ ಸ್ಥಳದಲ್ಲಿ ಮಂದಿರ ನಿರ್ಮಿಸುವುದ ಒಳ್ಳೆಯ ಹಿಂದೂಗಳಿಗೆ ಬೇಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ಆ ಸಾಹಿತ್ಯ ಮೇಳದಲ್ಲಿ ಶಶಿ ತರೂರ್ ಹಿಂದೂ ಧರ್ಮದ ಬಗ್ಗೆ ಬಹಳ ಆದ್ಯಾತ್ಮಿಕವಾಗ ಮಾತನಾಡಿದರು. ತಮ್ಮನ್ನು ತಾವು ಒಳ್ಳೆಯ ಹಿಂದೂ ಎಂದು ಬಿಂಬಿಸಿಕೊಂಡರು. ತಾವು ಬರೆದ “ವೈ ಐ ಆ್ಯಮ್ ಎ ಹಿಂದೂ”(ನಾನ್ಯಾಕೆ ಹಿಂದೂ) ಎಂಬ ಪುಸ್ತಕದ ಬಗ್ಗೆ ಮಾತನಾಡುತ್ತಾ ಹಿಂದೂ ಧರ್ಮದ ವಿಶಾಲತೆಯನ್ನು ಬಣ್ಣಿಸಿದರು.
ಹಿಂದೂ ಧರ್ಮದಷ್ಟು ವೈಶಾಲ್ಯತೆ ಬೇರೊಂದು ಧರ್ಮದಲ್ಲಿಲ್ಲ. ಅಧ್ಯಯನ, ಪೂಜೆ, ಯೋಗ, ಧ್ಯಾನ, ಸೇವೆ ಇತ್ಯಾದಿ ಮಾರ್ಗಗಳಿಂದ ಹಿಂದೂ ಧರ್ಮವನ್ನು ಪಾಲನೆ ಮಾಡುವ ಅವಕಾಶವಿದೆ. ನಾವು ಕಳೆದುಕೊಂಡ ವೈಚಾರಿಕ ನೆಲೆಯನ್ನು ಮರಳಿ ಗಳಿಸಬೇಕಿದೆ. ಹಿಂದೂಗಳಿಗೆ ಅವರ ಧರ್ಮದ ನಿಜ ತಿರುಳನ್ನು ತಿಳಿಸಿಕೊಡಬೇಕಿದೆ ಎಂದು ಹೇಳುತ್ತಾ ಶಶಿ ತರೂರ್ ಅವರು ಹಿಂದುತ್ವವಾದಿಗಳನ್ನ ತರಾಟೆಗೆ ತೆಗೆದುಕೊಂಡರು.
ಹಿಂದೂ ಧರ್ಮದ ಮೂಲಭೂತ ವಿಚಾರವೆಂದರೆ ಅದರಲ್ಲಿ ಮೂಲಭೂತವಾದಕ್ಕೆ ಆಸ್ಪದವೇ ಇಲ್ಲ. ಬಹಳ ಸಂಕುಚಿತವಾಗಿರುವ ಹಿಂದುತ್ವ ವಾದವು ಹಿಂದೂ ಧರ್ಮದ ಮೂಲಾಶಯಕ್ಕೆ ಧಕ್ಕೆ ತರುತ್ತದೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟರು.
ಮನುಷ್ಯನಲ್ಲಿ ಸ್ವಭಾತಃ ಅಸಹಿಷ್ಣುತೆ ಇರುತ್ತದೆ. ಇದಕ್ಕೆ ಹಿಂದೂ ಧರ್ಮವೂ ಹೊರತಲ್ಲ. ಆದರೆ ಹಿಂದುತ್ವದ ಮೂಲಕ ಈ ಅಸಹಿಷ್ಣುತೆಯನ್ನು ಉದ್ರೇಕಿಸಿ ಗಟ್ಟಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಹಿಂದೂಗಳಲ್ಲದವರಿಗೆ ಅದರ ಫಲ ಸಿಗಬಾರದು ಎಂಬ ವಿಚಾರದ ಮೇಲೆ ಹಿಂದುತ್ವ ನಿಂತಿದೆ ಎಂದು ಮಾಜಿ ಕೇಂದ್ರ ಸಚಿವ ತರೂರ್ ಟೀಕಿಸಿದರು.