ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣ: ಪಾದ್ರಿ ಫ್ರಾಂಕೊ ಮುಲಕ್ಕಲ್​ ಗೆ ಷರತ್ತು ಬದ್ಧ ಜಾಮೀನು

ತಿರುವನಂತಪುರಂ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಹಿರಿಯ ಕ್ಯಾಥೋಲಿಕ್‌ ಪಾದ್ರಿ ಫ್ರಾಂಕೊ ಮುಲಕ್ಕಲ್​ ಅವರಿಗೆ ಕೇರಳ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿದೆ.

ಕಳೆದ ಮೂರು ವಾರಗಳ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಪಾದ್ರಿ ಬಂಧನವಾಗಿತ್ತು. ಈ ಹಿಂದೆ ಜಿಲ್ಲಾ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಜಾಮೀನಿಗಾಗಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಬಿಷಪ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬಿಷಪ್‌ ಕೇರಳಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಮತ್ತು ಅವರ ಪಾಸ್‌ಪೋರ್ಟ್‌ನ್ನು ಕೋರ್ಟ್‌ಗೆ ಸಲ್ಲಿಸುವಂತೆ ಕೇಳಿದೆ. ಅಂತಿಮವಾಗಿ ಪೊಲೀಸರು ವರದಿ ಸಲ್ಲಿಸುವವರೆಗೆ ಎರಡು ವಾರಗಳಿಗೊಮ್ಮೆ ತನಿಖಾಧಿಕಾರಿಗಳಿಗೆ ವರದಿ ಮಾಡಿಕೊಳ್ಳುವಂತೆ ಷರತ್ತು ವಿಧಿಸಿದೆ.

2014 ರಿಂದ 2016 ರಲ್ಲಿ ತನ್ನ ಗೆಸ್ಟ್ ಹೌಸ್‌ಗೆ ಕ್ರೈಸ್ತ ಸನ್ಯಾಸಿನಿಯನ್ನು ಕರೆಸಿಕೊಂಡಿದ್ದ ಬಿಷಪ್, ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದು, ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ಆರೋಪಿಸಿ ಕ್ರೈಸ್ತ ಸನ್ಯಾಸಿನಿ ಜೂನ್‌ನಲ್ಲಿ ದೂರು ಸಲ್ಲಿಸಿದ್ದರು. ಭಾರತದಲ್ಲಿ ಅತ್ಯಾಚಾರ ಆರೋಪದ ಮೇಲೆ ಬಂಧಿತರಾದ ಮೊದಲ ಕ್ಯಾಥೊಲಿಕ್ ಬಿಷಪ್ ಎಂಬ ಕುಖ್ಯಾತಿಗೆ ಫ್ರಾಂಕೊ ಗುರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ