ರಾಮನಗರ: ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

ರಾಮನಗರ: ರಾಮನಗರ ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಚುನಾವಣಾ ಕಚೇರಿಗೆ ತೆರಳಿ ಇಂದು ನಾಮಪತ್ರ ಸಲ್ಲಿಸಿದರು.

ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಪತಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಉಪಸ್ಥಿತರಿದ್ದರು. ಕಾಂಗ್ರೆಸ್​ ನಾಯಕರ ಪರವಾಗಿ ಶಾಸಕ ಮುನಿರತ್ನ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಅನಿತಾಕುಮಾರಸ್ವಾಮಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಮತಯಾಚಿಸಿದರು. ನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ, ನನ್ನನ್ನು ಮನೆ ಮಗನಂತೆ ಕೈಹಿಡಿದಿದ್ದೀರಾ. ದೇಶದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಅಭ್ಯರ್ಥಿ ನಾನೇ ಎಂದುಕೊಂಡು ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಿ. ಕಾಂಗ್ರೆಸ್​, ಜೆಡಿಎಸ್​ ಒಟ್ಟಾಗಿ ಹೋದರೆ ರಾಜ್ಯದಲ್ಲಿ 28 ಕ್ಷೇತ್ರವನ್ನು ಗೆಲ್ಲಬಹುದು ಎಂದು ಹೇಳಿದರು.

ರಾಜಕೀಯವಾಗಿ ರಾಮನಗರ ಕ್ಷೇತ್ರ ನನಗೆ ಜನ್ಮಕೊಟ್ಟಿದೆ. ನನಗೂ, ರಾಮನಗರಕ್ಕೂ ತಾಯಿ, ಮಗನ ಸಂಬಂಧ. ಅಪಪ್ರಚಾರಕ್ಕೆ ಕಿವಿಗೊಡಬೇಡಿ. ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇನೆ. ಮಣ್ಣಿಗೆ ಹೋಗುವವರೆಗೆ ರಾಮನಗರ ಎಂದು ಕನವರಿಸುತ್ತೇನೆ ಎಂದರು.

ಅನಿತಾ ಕುಮಾರಸ್ವಾಮಿ ಮಾತನಾಡಿ, ಪ್ರತಿ ಚುನಾವಣೆಯೂ ಅಗ್ನಿಪರೀಕ್ಷೆಯೇ ಆಗಿದೆ. ಇಲ್ಲಿ ಭಿನ್ನಮತ ಇಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ