ಬೆಂಗಳೂರು, ಅ.15- ಐದು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ನ.6ರಂದು ನಾನು ಜೈಲಿಗೆ ಹೋಗುತ್ತೇನೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಸದ್ಯಕ್ಕೆ ಶ್ರೀರಾಮುಲು ಅಣ್ಣನಿಗೆ ನಾನು ಹೇಳುವ ವಿಷಯ ತಿಳಿಸಿರಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಅದೆಲ್ಲಿಗೋ ಕಳುಹಿಸುವುದಾಗಿ ಶ್ರೀರಾಮುಲು ಹೇಳಿದ್ದಾರೆ. ಅದನ್ನು ಮಾಧ್ಯಮಗಳು ದೊಡ್ಡದಾಗಿ ತೋರಿಸುತ್ತಿವೆ. ಜನ ಅದಕ್ಕೆ ಉತ್ತರ ನೀಡಲಿದ್ದಾರೆ ಎಂದರು.
ಶ್ರೀರಾಮುಲು ನನ್ನ ಫರ್ಸನಲ್ ಫ್ರೆಂಡ್ ವಿ ಲೈಕ್ ಈಚ್ ಅದರ್. ನನ್ನ ಮೇಲೆ ತುಂಬಾ ಪ್ರೀತಿ. ಹಾಗಾಗಿ ಏನೇನೋ ಹೇಳಿದ್ದಾರೆ. ಅವರು ಹೇಳುವ ಮಾತು ನಿಜವಾಗುತ್ತದೋ ಇಲ್ಲವೋ ಎಂಬುದನ್ನು ನ.6ರಂದು ಗೊತ್ತಾಗಲಿದೆ. ಸದ್ಯಕ್ಕೆ ನಮ್ಮಣ್ಣ ಶ್ರೀರಾಮಣ್ಣನಿಗೆ ನಾನು ಹೇಳಿದ ಮಾತುಗಳನ್ನು ಹೇಳಿ ಬಿಡಿ. ಅವರು ತುಂಬಾ ದೊಡ್ಡವರು ಎಂದು ಡಿ.ಕೆ.ಶಿವಕುಮಾರ್ ಕೈ ಮುಗಿದರು.
ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಶ್ರೀರಾಮುಲು ಹೇಳಿದ್ದಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಜಿಲ್ಲೆಯ ಶಾಸಕರು, ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕರ್ತ ಜತೆ ಸುರ್ಧೀಘ ಸಮಾಲೋಚನೆ ನಡೆಸಿದ್ದೇವೆ. ಎಲ್ಲರ ಅಭಿಪ್ರಾಯ ಪಡೆದು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದೇವೆ. ಲೋಕಸಭೆ ಚುನಾವಣೆ ಆಗಿರುವುದರಿಂದ ಹೈಕಮಾಂಡ್ನ ಒಪ್ಪಿಗೆ ಬೇಕು. ಕೆಲವೇ ಕ್ಷಣಗಳಲ್ಲಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡುತ್ತೇವೆ ಎಂದು ಅವರು ಹೇಳಿದರು.
ಎರಡು ಪಕ್ಷಗಳು ಒಂದೇ ಕಣ್ಣಿದ್ದಂತೆ:
ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಎರಡು ಕಣ್ಣುಗಳು ಒಂದೇ ದೃಷ್ಟಿ. ನಮ್ಮಿಬ್ಬರ ದೃಷ್ಟಿಕೋನವು ಒಂದೇ. ಹಾಗಾಗಿ ಜೆಡಿಎಸ್ನ ಮಧುಬಂಗಾರಪ್ಪ ಅವರನ್ನು ಕಣಕ್ಕಿಳಿಸಿದ್ದೇವೆ. ರಾಜಕಾರಣದಲ್ಲಿ ಒಂದನ್ನು ಗೆಲ್ಲಬೇಕಾದರೆ ಮತ್ತೊಂದನ್ನು ಸೋಲಬೇಕು. ಇಲ್ಲಿ ಕಾಂಗ್ರೆಸ್ ಸೋಲುತ್ತದೋ, ಗೆಲ್ಲುತ್ತದೋ ಎಂಬುದು ನ.6ರಂದು ಗೊತ್ತಾಗಲಿದೆ ಎಂದರು.
ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ವಿಲೀನಗೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಡಿಕೆಶಿ, ಕಾದು ನೋಡಿ ಎಂದರು.